ರಷ್ಯಾಗೆ ಉ.ಕೊರಿಯಾ ಶಸ್ತ್ರಾಸ್ತ್ರ ಪೂರೈಕೆ

ಪ್ಯಾಂಗ್ಯೊಂಗ್ (ಉತ್ತರ ಕೊರಿಯಾ), ಸೆ.೫- ವಿಶ್ವದಲ್ಲೇ ಪ್ರತ್ಯೇಕತೆಯನ್ನು ಹೊಂದಿರುವ ದೇಶಗಳ ಪೈಕಿ ಅಗ್ರಸ್ಥಾನದಲ್ಲಿರುವ ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜೊಂಗ್ ಉನ್ ಸದ್ಯದಲ್ಲೇ ರಷ್ಯಾಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ವ್ಲಾದಿಮಿರ್ ಪುಟಿನ್ ಜೊತೆಗಿನ ಭೇಟಿಯ ವೇಳೆ ಉಕ್ರೇನ್ ವಿರುದ್ಧದ ಯುದ್ದದಲ್ಲಿ ರಷ್ಯಾಗೆ ಉತ್ತರ ಕೊರಿಯಾ ಶಸ್ತ್ರಾಸ್ತ್ರ ಪೂರೈಸುವ ಕುರಿತು ಮಾತುಕತೆ ನಡೆಯಲಿದೆ ಎನ್ನಲಾಗಿದ್ದು, ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇದಕ್ಕೆ ಪೂರಕವೆಂಬಂತೆ ಕಳೆದ ಜುಲೈನಲ್ಲಿ ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ಉತ್ತರ ಕೊರಿಯಾದ ಶಸ್ತ್ರಾಸ್ತ್ರ ಕೇಂದ್ರಕ್ಕೆ ಭೇಟಿ ನೀಡಿರುವುದರ ಹಿಂದಿನ ಮರ್ಮ ಇದೀಗ ಅರ್ಥವಾಗಿದೆ.
ಯಾವುದೇ ಪ್ರಮುಖ ಮಾಧ್ಯಮಗಳು ಭೇಟಿಯ ಬಗ್ಗೆ ಅಧಿಕೃತವಾಗಿ ಹೇಳಿಲ್ಲ. ಅಲ್ಲದೆ ರಷ್ಯಾ ಯಾವ ಪ್ರದೇಶದಲ್ಲಿ ಭೇಟಿ-ಮಾತುಕತೆ ನಡೆಯಲಿದೆ ಎಂಬ ಬಗ್ಗೆ ಕೂಡ ಯಾರಿಗೂ ತಿಳಿದುಬಂದಿಲ್ಲ. ಅದೂ ಅಲ್ಲದೆ ರಷ್ಯಾಗೆ ಕಿಮ್ ಜೊಂಗ್ ಉನ್ ಅವರು ಶಸ್ತ್ರಸಜ್ಜಿತ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಉಭಯ ದೇಶಗಳ ನಡುವಿನ ಶಸ್ತ್ರಾಸ್ತ್ರ ಮಾತುಕತೆಗಳು ಸಕ್ರಿಯವಾಗಿ ಮುನ್ನಡೆಯುತ್ತಿವೆ ಎಂಬ ಶ್ವೇತಭವನದ ಹೇಳಿಕೆ ಹೊರಬಿದ್ದ ಬಳಿಕ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ರಾಷ್ಟ್ರೀಯ ಭದ್ರತಾ ಕೌನ್ಸಿಲ್ ವಕ್ತಾರ ಜಾನ್ ಕಿರ್ಬಿ, ರಷ್ಯಾದೊಂದಿಗೆ ಶಸ್ತ್ರಾಸ್ತ್ರ ಮಾತುಕತೆ ನಿಲ್ಲಿಸಲು ಹಾಗೂ ಅದಕ್ಕೆ ಶಸ್ತ್ರಾಸ್ತ್ರ ಒದಗಿಸದಂತೆ ಅಥವಾ ಮಾರಾಟ ಮಾಡದಂತೆ, ಸಾರ್ವಜನಿಕ ಬದ್ಧತೆಗಳಿಗೆ ಬದ್ಧವಾಗಿರುವ ನಾವು ಉತ್ತರ ಕೊರಿಯಾವನ್ನು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ರಷ್ಯಾಗೆ ಉತ್ತರ ಕೊರಿಯಾ ಶಸ್ತ್ರಾಸ್ತ್ರಗಳನ್ನು ಪೂರೈಸಿದರೆ ನಿರ್ಬಂಧಗಳು ಸೇರಿದಂತೆ ಅಮೆರಿಕಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಇನ್ನು ಸದ್ಯ ಉಕ್ರೇನ್ ಜೊತೆ ಯುದ್ದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದಿಂದ ರಷ್ಯಾ ಶಸ್ತ್ರಾಸ್ತ್ರ ಪಡೆದುಕೊಂಡರೆ ಭವಿಷ್ಯದಲ್ಲಿ ಅದೇ ರಾಷ್ಟ್ರಕ್ಕೆ ಪೂರೈಕೆ ಕೂಡ ಮಾಡಲಿದೆ ಎಂಬ ಮಾತು ಸದ್ಯ ವ್ಯಾಪಕವಾಗಿ ಕೇಳಿ ಬರುತ್ತಿದೆ.