ರಷ್ಯಾಕ್ಕೆ ೫೦೦ ಹೊಸ ನಿರ್ಬಂಧ ವಿಧಿಸಿದ ಬೈಡನ್

ವಾಷಿಂಗ್ಟನ್,ಫೆ.೨೪:ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಎರಡು ವರ್ಷಗಳು ಪೂರ್ಣಗೊಂಡು ೩ನೇ ವರ್ಷಕ್ಕೆ ಕಾಲಿಡುತ್ತಿದೆ. ಇದರ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾ ವಿರುದ್ಧ ೫೦೦ ಹೊಸ ನಿರ್ಬಂಧಗಳನ್ನು ಹೇರಿದ್ದಾರೆ.
ಈ ಕುರಿತು ಶ್ವೇತಭವನ ಬೈಡನ್ ಅವರ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಆಕ್ರಮಣಕಾರಿ ಯುದ್ಧಕ್ಕಾಗಿ ಮತ್ತು ರಷ್ಯಾ ವಿರೋಧ ಪಕ್ಷದ ನಾಯಕರಾಗಿದ್ದ ಅಲೆಕ್ಸಿ ನವಾಲ್ನಿ ಸಾವಿಗೆ ಸೇಡು ತೀರಿಸಿಕೊಳ್ಳಲು ರಷ್ಯಾ ವಿರುದ್ಧ ೫೦೦ ಕ್ಕೂ ಹೆಚ್ಚು ನಿರ್ಬಂಧ ವಿಧಿಸಲಾಗಿದೆ ಎಂದರು.
ನವಾಲ್ನಿ ಜೈಲು ವಾಸಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಮಿಲಿಟರಿ ಕೈಗಾರಿಕಾ ನೆಲೆ, ರಷ್ಯಾ ಹಣಕಾಸು ಸಚಿವಾಲಯ ಹೀಗೆ ಅನೇಕ ವಲಯಗಳಲ್ಲಿ ನಿರ್ಬಂಧಗಳನ್ನು ಉಲ್ಲಂಘಿಸುವವರಿಗೆ ಸಂಬಂಧಪಟ್ಟಿದ್ದು, ಉಕ್ರೇನ್ ಮೇಲಿನ ಆಕ್ರಮಣ ಹಾಗೂ ಸ್ವದೇಶದಲ್ಲಿ ಧಮನಕ್ಕೆ ಪುಟೀನ್ ಈ ನಿರ್ಬಂಧಗಳಿಗೆ ಕಠಿಣ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.
ಉಕ್ರೇನ್ ನಾಗರಿಕರು ರಷ್ಯಾ ವಿರುದ್ಧ ಹಾಗೂ ಸ್ವಾತಂತ್ರ್ಯ, ಭವಿಷ್ಯಕ್ಕಾಗಿ ಯಾವುದೇ ರಾಜಿ ಮಾಡಿಕೊಳ್ಳದೆ ಹೋರಾಟ ನಡೆಸುತ್ತಿದ್ದಾರೆ. ನ್ಯಾಟೊ ಇನ್ನಷ್ಟು ಪ್ರಬಲವಾಗಿದ್ದು, ಅಮೆರಿಕ ನೇತೃತ್ವದಲ್ಲಿ ಉಕ್ರೇನ್‌ಗೆ ಬೆಂಬಲ ನೀಡುವ ೫೦ ರಾಷ್ಟ್ರಗಳ ಜಾಗತಿಕ ಒಕ್ಕೂಟವು ಉಕ್ರೇನ್‌ಗೆ ನೀಡುವ ಸಹಾಯಹಸ್ತವನ್ನು ಮುಂದುವರೆಸಲು ಅಮೆರಿಕ ಬದ್ಧವಾಗಿದೆ ಎಂದು ಬೈಡನ್ ಸ್ಪಷ್ಟಪಡಿಸಿದ್ದಾರೆ.
೨೦೨೨ ಫೆ. ೨೪ ರಂದು ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಉಭಯ ರಾಷ್ಟ್ರಗಳ ನಡುವೆ ಸಾರ್ವಜನಿಕ ಆಸ್ತಿ-ಪಾಸ್ತಿ, ಪ್ರಾಣ ಹಾನಿಯಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.