ರವ ಇಡ್ಲಿ ಮಾಡುವ ವಿಧಾನ

ಪ್ರತಿನಿತ್ಯ ಮನೆಯಲ್ಲಿರುವವರಿಗೆ ತಿಂಡಿ ಮಾಡಬೇಕು. ಒಂದೊಂದು ದಿನ ದೋಸೆ, ಇಡ್ಲಿ, ಚಿತ್ರಾನ್ನಾ, ಪುಳಿಯೊಗರೆ, ಪಲಾವ್, ಉಪ್ಪಿಟ್ಟು ಇದೇ ಮಾಡುತ್ತಿರುತ್ತೀರಾ. ಬೇರೆ ಏನಾದರೂ ಮಾಡಬೇಕು ಅಂದುಕೊಳ್ಳುತ್ತೀರಾ. ಹಾಗಾಗಿ ನಿಮಗಾಗಿ ಬಿಸಿಬಿಸಿ ರವಾ ಇಡ್ಲಿ ಮಾಡುವ ವಿಧಾನ ಇಲ್ಲಿದೆ..
ಬೇಕಾಗುವ ಸಾಮಾಗ್ರಿಗಳು
ರವೆ – ಒಂದು ಕಪ್
ಮೊಸರು – ಮುಕ್ಕಾಲು ಕಪ್
ನೀರು – ಮುಕ್ಕಾಲು ಕಪ್
ಗೋಡಂಬಿ – ಹತ್ತು
ಸೋಡ – ಕಾಲು ಚಮಚ
ಹಸಿರುಮೆಣಸಿನ ಕಾಯಿ- ಐದು
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು
ಕ್ಯಾರೆಟ್ ತುರಿ- ಒಂದು
ಉಪ್ಪು – ರುಚಿಗೆ ತಕ್ಕಷ್ಟು
ಕಡ್ಲೆ ಬೇಳೆ – ಎರಡು ಚಮಚ
ಉದ್ದಿನ ಬೇಳೆ – ಒಂದು ಚಮಚ
ಜೀರಿಗೆ – ಕಾಲು ಚಮಚ
ಸಾಸಿವೆ – ಕಾಲು ಚಮಚ
ಎಣ್ಣೆ – ನಾಲ್ಕು ಚಮಚ (ಅಥವಾ ತುಪ್ಪ)
ಮಾಡುವ ವಿಧಾನ
ಮೊದಲು ಒಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಗೋಡಂಬಿಯನ್ನು ಹುರಿದುಕೊಂಡು ಎತ್ತಿಟ್ಟುಕೊಳ್ಳಿ. ಅದೇ ಬಾಣಲಿಗೆ ಒಂದು ಚಮಚ ಎಣ್ಣೆ ಹಾಕಿ ರವೆಯನ್ನು ಹುರಿಯಿರಿ. ರವೆಯ ಹಸಿ ವಾಸನೆ ಹೋಗುವವರೆಗೂ ಹುರಿದು, ಒಂದು ಬೌಲ್ ಗೆ ಎತ್ತಿಟ್ಟುಕೊಳ್ಳಿ. (ಸಣ್ಣ ಉರಿಯಲ್ಲಿ) ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ, ಜೀರಿಗೆ ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆ ಹಾಕಿ ಹುರಿಯಿರಿ. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನಕಾಯಿ ಮತ್ತು ತುರಿದ ಕ್ಯಾರೆಟ್ ಹಾಕಿ ಹುರಿಯಿರಿ. ಈಗ ಹುರಿದಿದ್ದ ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಬೌಲ್ ಗೆ ಹಾಕಿಕೊಳ್ಳಿ. ಹುರಿದಿರುವ ರವೆಗೆ ಮೊಸರು, ಸೋಡ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ, ೧೫ ನಿಮಿಷ ಬಿಡಿ. ಬಳಿಕ ನೀರು ಕಡಿಮೆಯಾದರೆ ಮತ್ತೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿರಿ. (ಇಡ್ಲಿ ಹಿಟ್ಟಿನ ಹದಕ್ಕೆ ರೆಡಿ ಇರಬೇಕು) ಈಗ ಇಡ್ಲಿ ಪಾತ್ರೆಗೆ ಎಣ್ಣೆ ಹಚ್ಚಿ, ಒಂದು ಗೋಡಂಬಿ ಮಧ್ಯೆ ಇಟ್ಟು, ಅದರ ಮೇಲೆ ಇಡ್ಲಿ ಮಿಕ್ಸ್ ಹಾಕಿ ಬೇಯಲು ಇಡಿ. ಹದಿನೈದು ನಿಮಿಷ ಬೇಯಿಸಿ ನಂತರ, ಹಬೆ ಹೋದ ಮೇಲೆ ತೆಗೆಯಿರಿ. ಈಗ ಚಟ್ನಿ, ಬಾಂಬೆ ಸಾಗು ಜೊತೆ ಬಿಸಿಬಿಸಿ ಇಡ್ಲಿ ತಿನ್ನಲು ರೆಡಿ.