ರವೆ ಕಜ್ಜಾಯ

ಬೇಕಾಗುವ ಸಾಮಾಗ್ರಿಗಳು:
ರವೆ: ಒಂದು ಕಪ್
ಅಕ್ಕಿ ಹಿಟ್ಟು: ಒಂದು ಕಪ್
ಬೆಲ್ಲ: ಒಂದೂವರೆ ಕಪ್
ಹಾಲು: ಅರ್ಧ ಕಪ್
ಗಸೆಗಸೆ : ಎರಡು ಚಮಚ
ಏಲಕ್ಕಿಪುಡಿ: ಅರ್ಧ ಚಮಚ
ಎಣ್ಣೆ
ತಯಾರಿಸುವ ವಿಧಾನ:
ರವೆಯನ್ನು ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ ಅದಕ್ಕೆ ಎರಡು ಚಮಚ ಎಣ್ಣೆ ಹಾಕಿ ನೀರು ಕುದಿದ ಮೇಲೆ ರವೆ ಹಾಕಿ ಬೇಯಿಸಬೇಕು. ನಂತರ ಬೆಲ್ಲವನ್ನು ರವೆಗೆ ಹಾಕಿ ಬೆಲ್ಲ ಕರಗಿ ರವೆಯಲ್ಲಿ ಮಿಶ್ರವಾಗುವವರೆಗೆ ಬೇಯಿಸಬೇಕು. ಈಗ ಈ ಮಿಶ್ರಣದ ಮೇಲೆ ಅಕ್ಕಿ ಹಿಟ್ಟು ಹಾಕಿ ಬೇಗನೆ ಮಿಶ್ರ ಮಾಡಿ ಗ್ಯಾಸ್ ಆಫ್ ಮಾಡಬೇಕು. ನಂತರ ಈ ಮಿಶ್ರಣದ ಪಾತ್ರೆಯ ಬಾಯಿಯನ್ನು ಮುಚ್ಚಿ ಸ್ವಲ್ಪ ಹೊತ್ತು ಇಡಬೇಕು. ಅಕ್ಕಿ ಹಿಟ್ಟು ರವೆ ಜೊತೆ ಚೆನ್ನಾಗಿ ಮಿಶ್ರವಾಗದಿದ್ದರೆ ಚಿಂತೆ ಮಾಡಬೇಡಿ, ಏಕೆಂದರೆ ಅಕ್ಕಿ ಹಿಟ್ಟು ಎಣ್ಣೆಯಲ್ಲಿ ಹಾಕಿದಾಗ ಬೇಯುತ್ತದೆ. ನಂತರ ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಹಾಲು ಸೇರಿಸಿ ಚಪಾತಿಗೆ ಕಲೆಸುವ ರೀತಿಯಲ್ಲಿ ಕಲೆಸಬೇಕು. ಇದಕ್ಕೆ ಗಸೆಗಸೆ ಮತ್ತು ಏಲಕ್ಕಿ ಹಾಕಿ ಮಿಶ್ರ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿ ವಡೆಗೆ ತಟ್ಟುವ ರೀತಿಯಲ್ಲಿ ತಟ್ಟಬೇಕು. ನಂತರ ದೊಡ್ಡ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ, ಎಣ್ಣೆ ಕಾದ ಮೇಲೆ ಅದರಲ್ಲಿ ತಟ್ಟಿದ ರವೆ ಮಿಶ್ರಣವನ್ನು ಹಾಕಿ ಕರಿದರೆ ರುಚಿಯಾದ ರವೆ ಕಜ್ಜಾಯ ರೆಡಿ.