ರವೆ ಉಂಡೆ ಮಾಡುವ ವಿಧಾನ

ರವೆ ಉಂಡೆ ಇದು ಕರ್ನಾಟಕದ ಒಂದು ಬಗೆಯ ಸಿಹಿ ತಿಂಡಿ. ರವೆ ಉಂಡೆ ಒಂದು ಬಗೆಯ ಒಣ ತಿಂಡಿಯಾಗಿರುವುದರಿಂದ ವಾರಗಳ ಗಟ್ಟಲೆ ಕೆಡುವುದಿಲ್ಲ, ರವೆ ಉಂಡೆಯನ್ನು ಹಬ್ಬದ ಸಮಯದಲ್ಲಿ ದೇವರ ನೈವೇದ್ಯಕ್ಕೆ ಮಾಡಿ ಹಂಚುವುದು ಸಂಪ್ರದಾಯ. ಕೆಲ ಹಬ್ಬಗಳಲ್ಲಿ, ವಿಶೇಷವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ರವೆ ಉಂಡೆಯನ್ನು ತಪ್ಪದೆ ಮಾಡುತ್ತಾರೆ. ನವರಾತ್ರಿ, ಗಣೇಶನ ಹಬ್ಬ ಇತ್ಯಾದಿಗಳಲ್ಲಿ ಹೆಂಗಸರು ಬಾಗಿನದ ರೂಪದಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ.

ಬೇಕಾಗುವ ಸಾಮಗ್ರಿ
ತುಪ್ಪ ಅರ್ಧ ಕಪ್
ಒಣ ದ್ರಾಕ್ಷಿ ೧/೪ ಕಪ್
ಗೋಡಂಬಿ ೧/೪ ಕಪ್
ಸಣ್ಣ ರವೆ ಅಥವಾ ಸೂಜಿ ರವೆ ೧/೨ ಬೌಲ್
ಸಕ್ಕರೆ ೧ ಕಪ್
ಒಣಕೊಬ್ಬರಿ ೩/೪ ಕಪ್
ಏಲಕ್ಕಿ ೧-೨
ಹಾಲು ೩ ಚಮಚ

ಮಾಡುವ ವಿಧಾನ:

ಪ್ಯಾನ್‌ಗೆ ತುಪ್ಪ ಹಾಕಿ ಬಿಸಿ ಮಾಡಿ.
ಅದಕ್ಕೆ ದ್ರಾಕ್ಷಿ ಹಾಗೂ ಗೋಡಂಬಿ ಹಾಕಿ ಹುರಿದು ಒಂದು ಬೌಲ್‌ನಲ್ಲಿ ಹಾಕಿಡಿ.

ಉಳಿದ ತುಪ್ಪದಲ್ಲಿ ರವೆ ಹುರಿದು ಇಡಿ. ರವೆಯ ಹಸಿ ವಾಸನೆ ಹೋಗುವಷ್ಟು ಹೊತ್ತು ಹುರಿದು ಇಡಿ.
ಈಗ ಅರ್ಧ ಕಪ್ ತುಪ್ಪ ಹಾಕಿ ಅದರಲ್ಲಿ ಹುರಿದ ರವೆ ಮತ್ತೆ ೨-೩ ನಿಮಿಷ ಹುರಿಯಿರಿ, ನಂತರ ಸ್ಟೌವ್ ಆಫ್ ಮಾಡಿ ಇಡಿ.
ಇದೇ ಸಮಯದಲ್ಲಿ ಒಣ ಕೊಬ್ಬರಿಗೆ ಏಲಕ್ಕಿ, ಸಕ್ಕರೆ ಹಾಕಿ ಒಂದು ರೌಂಡ್ ರುಬ್ಬಿ, ಅದು ಸ್ವಲ್ಪ ಹುಡಿ-ಹುಡಿಯಾಗಿರಲಿ.
ರೋಸ್ಟ್ ಮಾಡಿದ ಸೂಜಿ ರವೆಯನ್ನು ದೊಡ್ಡ ಬೌಲ್ ಹಾಕಿ, ಅದರಲ್ಲಿ ಉಳಿದ ಸಾಮಗ್ರಿ ಹಾಕಿ, ಕೆನೆ ತೆಗೆದ ಹಾಲು ಹಾಕಿ ಮಿಶ್ರ ಮಾಡಿ.
ಈಗ ಅವುಗಳಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿದರೆ ರುಚಿಕರವಾದ ರವೆ ಲಡ್ಡು ರೆಡಿ.
ಕೊಬ್ಬರಿ ಹಾಗೇ ಹಾಕಬಹುದು, ಆದರೆ ಮಿಕ್ಸಿಯಲ್ಲಿ ರುಬ್ಬಿ ಹಾಕಿದರೆ ಲಡ್ಡು ಇನ್ನೂ ರುಚಿ ಅನಿಸುವುದು. * ರವೆ ಉಂಡೆಯನ್ನು ಮಿಶ್ರಣ ಬಿಸಿ-ಬಿಸಿ ಇರುವಾಗಲೇ ಕಟ್ಟಿ. * ಒಂದು ವೇಳೆ ಉಂಡೆ ಒಡೆದರೆ ಸ್ವಲ್ಪ ಹಾಲು ಕೂಡ ಸೇರಿಸಿ ಉಂಡೆ ಕಟ್ಟಿ.