ರವೀನಾ ಟಂಡನ್ ೨೧ ವರ್ಷದಲ್ಲೇ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ವಿವಾದ ಎಬ್ಬಿಸಿದ್ದ ನಟಿ.

ನಟಿ ರವೀನಾ ಟಂಡನ್ ೧೯೯೫ ರಲ್ಲಿ ಇಬ್ಬರು ಮಕ್ಕಳಾದ ಪೂಜಾ ಮತ್ತು ಛಾಯಾ ಇವರನ್ನು ದತ್ತು ಪಡೆದಿದ್ದರು. ಆಗ ರವೀನಾರಿಗೆ ಕೇವಲ ೨೧ ವರ್ಷ. ರವೀನಾ ಟಂಡನ್ ನೆನಪಿಸುವಂತೆ ಈ ನಿರ್ಧಾರಕ್ಕೆ ಅನೇಕ ಟೀಕೆಗಳು ಬಂದಿತ್ತು. ಜನರು ಆ ದಿನಗಳಲ್ಲಿ ಮಾತನಾಡುತ್ತಿದ್ದಾರಂತೆ- ರವೀನಾ ಟಂಡನ್ ರನ್ನು ವಿವಾಹವಾಗಲು ಯಾರೂ ಮುಂದೆ ಬರಲಾರರು ಎಂದು.
ಆದರೆ ತನ್ನ ಅಂದಿನ ನಿರ್ಧಾರ ಬಹಳ ಉತ್ತಮ ನಿರ್ಧಾರವೆಂದು ರವೀನಾ ಹೇಳುತ್ತಾರೆ.

ಪೂಜಾ ಮತ್ತು ಛಾಯಾ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡದ್ದು ನನ್ನ ಜೀವನದ ಅತ್ಯುತ್ತಮ ತೀರ್ಮಾನ. ನಾನು ಅವರನ್ನು ಎತ್ತಿಕೊಳ್ಳುವ ದಿನಗಳಿಂದ ಹಿಡಿದು ಅವರು ತಮ್ಮ ಬದುಕನ್ನು ಸ್ಥಾಪಿಸಿಕೊಳ್ಳುವ ತನಕ ನಾನು ಅವರ ಜೊತೆಗಿದ್ದ ಖುಷಿ ನನಗಿದೆ.ಅಂದಿನ ನನ್ನ ನಿರ್ಧಾರವನ್ನು ಬಹಳಷ್ಟು ಜನ ಟೀಕಿಸಿದ್ದರು. ಯಾರೂ ನನ್ನನ್ನು ವಿವಾಹವಾಗಲು ಬರಲಾರರು ಎಂದಿದ್ದರು. ಆದರೆ ಹಾಗೇನೂ ಆಗಲಿಲ್ಲ ಎಂದಿದ್ದಾರೆ.

ರವೀನಾ ಟಂಡನ್ ೨೦೦೪ರಲ್ಲಿ ಫಿಲ್ಮ್ ಡಿಸ್ಟ್ರಿಬ್ಯೂಟರ್ ಅನಿಲ್ ಥಡಾನೀ ಅವರ ಜೊತೆ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ರಶಾ ಮತ್ತು ಮಗ ರಣಬೀರ್ ವರ್ಧನ್.
ದತ್ತು ಪಡೆದ ಇಬ್ಬರು ಮಕ್ಕಳಲ್ಲಿ ಛಾಯಾ ಗಗನಸಖಿ ಮತ್ತು ಪೂಜಾ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಇವರಿಬ್ಬರ ಮದುವೆಯಾಗಿದ್ದು ಅವರಿಗೆ ಮಕ್ಕಳೂ ಆಗಿದ್ದಾರೆ.

“ನನ್ನ ಮಕ್ಕಳು ನನ್ನ ಉತ್ತಮ ಸ್ನೇಹಿತರು. ನನ್ನ ಮದುವೆಯ ದಿನ ನನ್ನ ಮಕ್ಕಳಿಬ್ಬರೂ ನನ್ನ ಜೊತೆ ಕಾರಲ್ಲಿ ಕೂತಿದ್ದರು ಮತ್ತು ನನ್ನನ್ನು ಮಂಟಪದ ತನಕ ಕರೆದೊಯ್ದಿದ್ದರು. ಅಂದಿನ ಭಾವನಾತ್ಮಕ ಕ್ಷಣಗಳನ್ನು ಈಗಲೂ ನಾನು ನೆನಪಿಸಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ ರವೀನಾ.

ಊರ್ಮಿಳಾ ಮಾತೊಂಡ್ಕರ್ ವರ್ಸಸ್ ಕಂಗನಾ ರಣಾವತ್

ಇತ್ತೀಚೆಗಷ್ಟೇ ಕಾಂಗ್ರೆಸ್ ತ್ಯಜಿಸಿ ಶಿವಸೇನೆ ಸೇರಿದ ನಟಿ ಊರ್ಮಿಳಾ ಮಾತೊಂಡ್ಕರ್ ಮತ್ತು ಕಂಗನಾ ರಣಾವತ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಸಂವಾದ ಮತ್ತೆ ತೀವ್ರವಾಗಿ ಕಂಡುಬರುತ್ತಿದೆ.

ಇತ್ತೀಚೆಗೆ ಊರ್ಮಿಳಾ ಖರೀದಿಸಿದ ಹೊಸ ಆಫೀಸ್ ಮತ್ತು ಆಕೆಯ ನಿಕಾಹ್, ಧರ್ಮದ ಕುರಿತು ಚರ್ಚೆ ನಡೆಯುತ್ತಿದೆ. “ಊರ್ಮಿಳಾ ಅವರೇ, ನೀವು ನಿಕಾಹ್ ಗಾಗಿ ಧರ್ಮ ಪರಿವರ್ತನೆ ಮಾಡಿದ್ದನ್ನು ಕೇಳಿದೆ. ಆದರೂ ನನಗೆ ನಿಮ್ಮ ಬಗ್ಗೆ ಹೆಮ್ಮೆ, ನೀವು ಗಣಪತಿಗೆ ಜೈಕಾರ ಹಾಕಿರುವುದನ್ನು ಕಂಡು” ಎಂದು ವ್ಯಂಗ್ಯವಾಡಿದ್ದಾರೆ ಕಂಗನಾ.


ಈ ಬಗ್ಗೆ ಊರ್ಮಿಳಾ ಪ್ರತಿಕ್ರಿಯಿಸುತ್ತಾ “ನನ್ನ ಧರ್ಮದ ಕುರಿತು ಮಾತಾಡಿ ನೀವು ಚರ್ಚೆಯನ್ನು ಬೇರೆಡೆ ಕೊಂಡು ಹೋಗುತ್ತಿದ್ದೀರಿ. ನಿಮ್ಮಲ್ಲಿ ಅಸಲಿ ವಿಷಯದ ಚರ್ಚೆ ಮಾಡಲು ಧೈರ್ಯ ಇಲ್ಲ. ಜನರ ಎದುರುಗಡೆ ನನ್ನನ್ನು ಕೆಳಮಟ್ಟಕ್ಕೆ ತಳ್ಳಿ, ನನ್ನ ಹೆಸರು, ನನ್ನ ನಿಜ ಜೀವನವನ್ನು, ನನ್ನ ವಿವಾಹ ….ಇದನ್ನೆಲ್ಲಾ ನಡುವೆ ತಂದು ಕಂಗನಾ ನೀವು ನನ್ನ ಬಗ್ಗೆ ಕೆಟ್ಟ ಹೆಸರು ತರಲು ನೋಡುತ್ತಿದ್ದೀರಿ. ಇದು ನನ್ನ ಮನೋಬಲವನ್ನು ಕುಂಠಿತಗೊಳಿಸುವ ಪ್ರಯತ್ನವನ್ನು ಮಾಡಿದಂತಿದೆ .ಆದರೆ ಏನೂ ತಪ್ಪು ಮಾಡದ ನಾನೇಕೆ ಹೆದರಬೇಕು?” ಎಂದಿದ್ದಾರೆ ಊರ್ಮಿಳಾ.


ಈ ಚರ್ಚೆ ಆರಂಭವಾದದ್ದು ಇತ್ತೀಚೆಗೆ ಊರ್ಮಿಳಾ ಮೂರು ಕೋಟಿ ರೂಪಾಯಿ ಖರ್ಚು ಮಾಡಿ ಒಂದು ಭವ್ಯ ಆಫೀಸ್ ಖರೀದಿಸಿದ ನಂತರ .
ಈ ಬಗ್ಗೆ ಕಂಗನಾ ರಣಾವತ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ “ಪ್ರಿಯ ಊರ್ಮಿಳಾಜೀ, ನಾನು ಬಹಳ ಶ್ರಮ ಪಟ್ಟು ಮನೆ ಖರೀದಿಸಿದೆ .ಆದರೆ ಅದನ್ನು ಕೂಡ ಕಾಂಗ್ರೆಸ್ ಕೆಡವಿ ಹಾಕಿದೆ. ನಾನು ಬಿಜೆಪಿಯನ್ನು ಖುಷಿಪಡಿಸಲು ಹೋಗಿ ಈಗ ನನ್ನ ಕೈಯಲ್ಲಿ ೨೫ಕ್ಕೂ ಹೆಚ್ಚು ಕೇಸುಗಳಿವೆ. ನಾನು ನಿಮ್ಮ ಹಾಗೆ ಬುದ್ಧಿವಂತೆ ಆಗಿದ್ದರೆ ಕಾಂಗ್ರೆಸ್ಸನ್ನು ಖುಷಿಪಡಿಸಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ, ನಾನೆಷ್ಟು ಮೂರ್ಖಳು ನೋಡಿ ,ಹೌದಲ್ಲ “ಎಂದು ವ್ಯಂಗ್ಯವಾಡಿದ್ದಾರೆ.


ಇತ್ತ ಊರ್ಮಿಳಾ ಮಾತೊಂಡ್ಕರ್ ಕಂಗನಾ ರ ಪೋಸ್ಟಿಗೆ ಪ್ರತಿಕ್ರಿಯಿಸಿ ಮೀಡಿಯಾಕ್ಕೆ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ.
” ನಮಸ್ಕಾರ ಕಂಗನಾರಿಗೆ. ಇಂದು ಈ ವಿಡಿಯೋದ ಮೂಲಕ ಇಡೀ ದೇಶಕ್ಕೆ ನಾನು ಹೇಳಲು ಇಚ್ಛಿಸುವೆ, ನನ್ನ ಎಲ್ಲಾ ಡಾಕ್ಯುಮೆಂಟ್ಸ್ ಹಿಡಿದು ಬರುವೆ. ಕಂಗನಾ ನೀವೂ ಪರಿಶೀಲಿಸಬಹುದು. ೨೦೧೧ರಲ್ಲಿ ಹೆಚ್ಚಿಗೆ ಇಲ್ಲದಿದ್ದರೂ ಇಪ್ಪತ್ತು-ಇಪ್ಪತ್ತೈದು ವರ್ಷಗಳ ಕ್ಯಾರಿಯರ್ ನಲ್ಲಿ ಬಹಳಷ್ಟು ಶ್ರಮಪಟ್ಟು ನಾನು ಅಂಧೇರಿಯಲ್ಲಿ ಆಫೀಸ್ ಖರೀದಿಸಿದ್ದೇನೆ. ಪೇಪರ್ಸ್ ಅನ್ನು ಯಾವಾಗಲೂ ಪರಿಶೀಲಿಸಬಹುದು. ಆದರೆ ನಾವು ಕಟ್ಟಿದ ತೆರಿಗೆಯಲ್ಲಿ ನಿಮಗೆ ಸರಕಾರ ವೈ ಪ್ಲಸ್ ಸುರಕ್ಷೆಯನ್ನು ಪ್ರದಾನಿಸಿದೆ.ಅದರ ಕಾರಣವನ್ನು ತಿಳಿಯಲು ಇಡೀ ದೇಶಕ್ಕೆ ಉತ್ಸುಕತೆ ಇದೆ. ಜೈ ಹಿಂದ್ ಜೈ ಮಹಾರಾಷ್ಟ್ರ ,ಗಣಪತಿ ಬಪ್ಪ ಮೋರ್ಯ” ಎಂದಿದ್ದಾರೆ.