ರವೀಂದ್ರ ಯೋಜನೆಗಳಿಗೆ ಮುಕ್ತಿ ನೀಡಿದ ಸರದಾರ

ಹರಪನಹಳ್ಳಿ ನ 03: ಹರಪನಹಳ್ಳಿ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ರಾಜಕಾರಣವನ್ನು ಪ್ರಶ್ನೆ ಮಾಡೋ ಜನರಿಗೆ ಪ್ರಶ್ನೆ ಕೇಳುತ್ತೇನೆ. ಪ್ರತಿಯೊಬ್ಬರನ್ನು ಹಡದವ್ವ ಕೂಡಾ ಹೆಣ್ಣೆಂಬುವುದನ್ನು ಮರೆಯಬೇಡಿ. ಹೆಣ್ಣನ್ನು ತುಚ್ಛವಾಗಿ ಕಾಣಬೇಡಿ, ರಾಜಕಾರಣದಲ್ಲಿ ಹೆಣ್ಣಿನ ಪ್ರವೇಶ ಪ್ರಶ್ನೆ ಮಾಡುವುದಾದರೆ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಜೀ, ಪ್ರಿಯಾಂಕಗಾಂಧಿ ಅವರನ್ನು ಪ್ರಶ್ನೆ ಮಾಡುವ ನಿಯತ್ತು ನಿಮ್ಮಲ್ಲಿದೆಯಾ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಪ್ರಶ್ನಿಸಿದ್ದಾರೆ.
ಹರಪನಹಳ್ಳಿ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ ದ್ವಿತೀಯ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ರವೀಂದ್ರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಮಾಜಿ ಶಾಸಕ, ಸಹೋದರ ದಿ.ಎಂ.ಪಿ.ರವೀಂದ್ರ ಬದುಕಿದ್ದಾಗ ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಹೆದರುತ್ತಿದ್ದವರು ಇವತ್ತು ಟೀಕಿಸುತ್ತಿದ್ದಾರೆ. ಕಾಲಚಕ್ರ ಬದಲಾಗುತ್ತಲೇ ಇರುತ್ತೆ, ಇವತ್ತಿನ ಪರಿಸ್ಥಿತಿ ನಾಳೆ ಇರೋದಿಲ್ಲ ಎಂಬುವುದನ್ನು ಅರಿತುಕೊಳ್ಳಬೇಕು ಎಂದು ಅವರು ತಿರುಗೇಟು ನೀಡಿದ್ದಾರೆ.
ಸಹೋದರ ದಿ.ಎಂ.ಪಿ.ರವೀಂದ್ರ ಕೇವಲ ರಾಜಕಾರಣಕ್ಕೆ ಸೀಮಿತವಾಗಿರಲ್ಲ, ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ತಾಲ್ಲೂಕಿನಲ್ಲಿ ನೆನಗುದಿಗೆ ಬಿದ್ದ ಯೋಜನೆಗಳಿಗೆ ಮುಕ್ತಿ ನೀಡಿದ ಸರದಾರ ಎನಿಸಿಕೊಂಡಿದ್ದರು. ಎಂ.ಪಿ.ರವೀಂದ್ರ ಹರಪನಹಳ್ಳಿ ಶಾಸಕನಾಗಿ ಇಷ್ಟೊಂದು ಜನರ ಪ್ರೀತಿ ಗಳಿಸಿದ್ದು ನಿಜಕ್ಕೂ ನನಗೆ ಹೆಮ್ಮೆ ಅನ್ನಿಸಿದೆ. ರವೀಂದ್ರ ಎಷ್ಟು ಸಿಡುಕು ಮಾಡುತ್ತಿದ್ದನೋ ಅಷ್ಟೇ ಮೃದುಹೃದಯವುಳ್ಳವರು ಆಗಿದ್ದರು ಎಂದು ತಿಳಿಸಿದರು.
ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹರಪನಹಳ್ಳಿ ತಾಲ್ಲೂಕಿನಲ್ಲಿ ಇಲ್ಲಿನ ಜನರು ಕೆಲಸ ಅರಸಿ ಗುಳೆ ಹೋಗುವುದು ಸಾಮಾನ್ಯ. ಇದನ್ನು ತಪ್ಪಿಸಲು ಎಂ.ಪಿ.ರವೀಂದ್ರ ಪಟ್ಟು ಹಿಡಿದು ತಾಲೂಕಿಗೆ ಹೈದ್ರಾಬಾದ್ ಕರ್ನಾಟಕ(371ಜೆ ಕಲಂ) ಸೌಲಭ್ಯ ದೊರಕಿಸುವುರ ಜೊತೆಗೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 60 ಕೆರೆಗಳಿಗೆ ನದಿಯಿಂದ ನೀರು ತುಂಬಿಸುವುದು ಹಾಗೂ ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಯೋಜನೆಗಳಿಗೆ ಕ್ಯಾಬಿನೆಟ್ ಅನುಮತಿ ಪಡೆದು ಹಣ ಬಿಡುಗಡೆ ಮಾಡಿಸುವ ಮೂಲಕ ಅಧುನಿಕ ಭಗೀರಥರಾಗಿದ್ದಾರೆ ಎಂದರು.
ಗಾಯಕ ಬಸವರಾಜ್ ಭಂಡಾರಿ ತಂಡದಿಂದ ಜಾನಪದ ಸಂಭ್ರಮ ನೆರವೇರಿತು. ತಾ.ಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಕಲ್ಲಹಳ್ಳಿ ಗೋಣ್ಯಪ್ಪ, ಮತ್ತಿಹಳ್ಳಿ ರಾಮಣ್ಣ, ಜಯಲಕ್ಷ್ಮಿ ಮಾತನಾಡಿದರು.
ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಪ್ರಕಾಶ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ದಿವಾಕರ್, ಮುಖಂಡರಾದ ಚಂದ್ರೇಗೌಡ, ಕೆ.ಎಂ.ಬಸವರಾಜಯ್ಯ, ತಾಪಂ ಸದಸ್ಯ ಓ.ರಾಮಪ್ಪ, ಯಡಿಹಳ್ಳಿ ಶೇಖರಪ್ಪ, ಶಿವಕುಮಾರಗೌಡ, ಚಿದಾನಂದಪ್ಪ, ಕಲ್ಲಹಳ್ಳಿ ಗೋಣ್ಯಪ್ಪ, ಗೊಂಗಡಿ ನಾಗರಾಜ್, ಕವಿತಾ ಸುರೇಶ್, ನೇತ್ರಾವತಿ ಉಮಾ, ನಿರ್ಮಲ, ನಾಗಮಂಜುಳಾ, ವನಜಾಕ್ಷಮ್ಮ, ಉದಯಶಂಕರ್, ಮತ್ತೂರು ಬಸವರಾಜ್, ವೃಷಬೇಂದ್ರಪ್ಪ, ಕನಕಬಸಾಪುರ ಮಂಜುನಾಥ್, ರಾಯದುರ್ಗದ ವಾಗೀಶ್, ಮೃತ್ಯುಂಜಯ, ಎಂ.ಪಿ.ಕೃಷ್ಣಮೂರ್ತಿ, ತೊಗರಿಕಟ್ಟಿ ದುರುಗಪ್ಪ, ಮುದಗಲ್ ಗುರುನಾಥ್,ಕಾನಳ್ಳಿ ರುದ್ರಪ್ಪ, ಇತರರು ಉಪಸ್ಥಿತರಿದ್ದರು