ರವೀಂದ್ರನಾಥ್ ಕರ್ಮಯೋಗಿ ಓಲೈಕೆ ರಾಜಕಾರಣ ಅವರಿಗೆ ಗೊತ್ತಿಲ್ಲ: ಕಾಗೇರಿ

ದಾವಣಗೆರೆ.ಜು.೨೦: ರವೀಂದ್ರನಾಥ್ ಒಬ್ಬ ಕರ್ಮಯೋಗಿ, ಓಲೈಕೆ ರಾಜಕಾರಣ ಅವರಿಗೆ ಗೊತ್ತಿಲ್ಲ. ಅವರು ಯಾರ ಹಿಂದೆ ಹೋಗಿ ನಾಯಕರಾದವರಲ್ಲ. ರೈತಪರ ಮತ್ತು ಜನಪರ ಹೋರಾಟಗಳಿಂದಲೇ ನಾಯಕರಾದವರು ಎಂದು ರಾಜ್ಯದ ವಿಧಾನ ಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಎಸ್.ಎ. ರವೀಂದ್ರನಾಥ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಎಸ್.ಎ.ರವೀಂದ್ರನಾಥ್ ಅವರ ಬದುಕು-ರಾಜಕೀಯ ಜೀವನ ಕುರಿತ ಕೃಷಿ ಕಣ್ಮಣಿ ಪುಸ್ತಕದ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರವೀಂದ್ರನಾಥ ಅವರು ಬೇರೆಯವರ ತರಹ ಬಾಯಿ ಮಾತಲ್ಲಿ ಮಣ್ಣಿನ ಮಗನೆಂದು ಹೇಳಿಲ್ಲ. ಮಣ್ಣಿನ ಮಗನಾಗಿಯೇ ಕೆಲಸಗಳಲ್ಲಿ ತೋರಿಸಿದವರು. ರೈತರ ಪರ ಹೋರಾಟ ಮಾಡಿ ರೈತರಿಗೆ ನ್ಯಾಯ ದೊರಕಿಸಿಕೊಟ್ಟವರು. ಶಾಸಕ, ಸಚಿವನಾದರೂ ಸಹ ಆ ಹಮ್ಮು-ಬಿಮ್ಮನ್ನು ಎಂದಿಗೂ ತೋರಿಸದ ಸರಳ ವ್ಯಕ್ತಿತ್ವ ರೂಢಿಸಿಕೊಂಡವರು ಎಂದು ಹೇಳಿದರು.ರೈತಪರ ಮತ್ತು ಜನಪರ ಹೋರಾಟಗಳ ವೇಳೆ ಅದೆಷ್ಟೋ ಕಷ್ಟ ಸುಖಗಳನ್ನು ಅವರು ಎದುರಿಸಿದ್ದಾರೆ. ಆದರೆ, ಅವುಗಳನ್ನು ಎದುರಿಸಿ ಸಮಾಜದ, ರಾಷ್ಟ್ರದ ಋಣ ತೀರಿಸುವ ಕೆಲಸ ಮಾಡಿದ್ದಾರೆ. ಕರ್ಮ ಸಿದ್ಧಾಂತಕ್ಕೆ ಒತ್ತು ನೀಡಿದ್ದಾರೆ ಎಂದರು.ಕರ್ಮ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದ್ದ ರವೀಂದ್ರನಾಥ್, ರೈತರ ಅನುಕೂಲಕ್ಕೆ ಆಗಬೇಕಾದ ಕೆಲಸಗಳನ್ನು ಮತಕ್ಕಾಗಿ, ಚುನಾವಣೆಗಾಗಿ ಅಥವಾ ಓಲೈಕೆಗಾಗಿ ಮಾಡಿದ್ದಲ್ಲ. ಕೇವಲ ರೈತರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಗಾಗಿ ಮಾಡಿದವರು. ರವಿಂದ್ರನಾಥ್ ಅವರು ಹಿಂದೆ ಠೇವಣಿ ಕಳೆದುಕೊಳ್ಳುವುದು ಗೊತ್ತಿದ್ದರೂ ಸಹ ಚುನಾವಣೆಗೆ ನಿಂತು ಸೋಲುತಿದ್ದರು. ಏಕೆಂದರೆ ಜನ ಸಂಘ, ಬಿಜೆಪಿ ಬಗ್ಗೆ ರಾಜ್ಯದ ಜನರಿಗೆ ತಿಳಿಸಬೇಕೆಂಬುದಷ್ಟೆ ಅವರ ಉದ್ದೇಶವಾಗಿತ್ತು ಎಂದು ತಿಳಿಸಿದರು.ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಎಸ್.ಎ.ರವೀಂದ್ರನಾಥ, ಮೇಯರ್ ಜಯಮ್ಮ, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ದೂಡಾ ಅಧ್ಯಕ್ಷ ಕೆ.ಎಂ.ಸುರೇಶ್, ಶಾಮನೂರು ಲಿಂಗರಾಜ, ಬಸವರಾಜ್ ಹನುಮಲಿ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಸಂಗನಗೌಡ ಇತರರು ಇದ್ದರು.

Attachments area