ರವಿ ಬೋಸರಾಜುರವರದ್ದು ರಾಜಕೀಯ ನಾಟಕವಲ್ಲದೇ ಮತ್ತೇನು – ಸಂಜೀವ್ ರೆಡ್ಡಿ

ರಾಯಚೂರು.ಮೇ.೧೯- ದೇಶದಲ್ಲಿ ಕೋವಿಡ್ ಮಹಾಮಾರಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ಸರ್ಕಾರದ ಜೊತೆ ಸೇರಿ ಅನೇಕ ರಾಜಕೀಯ ನಾಯಕರು, ಸಂಘ ಸಂಸ್ಥೆಗಳು, ದಾನಿಗಳು ಯುವಕರು ಕೋವಿಡ್ ವಿರುದ್ಧದ ಯುದ್ಧದಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಇದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ರವಿ ಬೋಸರಾಜ್ ಇವರು ಪರಿಸ್ಥಿತಿಯ ಲಾಭ ಪಡೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ರಾಜಕೀಯ ನಾಟಕದ ಅಸಹ್ಯ ವಲ್ಲದದೇ ಮತ್ತೇನು ಎಂದು ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಅರುಣ್ ಧೋತರಬಂಡಿ ಅವರನ್ನು ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷರಾದ ಸಂಜೀವರೆಡ್ಡಿ ಪ್ರಶ್ನಿಸಿದ್ದಾರೆ.
ನವೋದಯ ಆಸ್ಪತ್ರೆಗೆ ಅಗತ್ಯವಿರುವಷ್ಟು ಆಕ್ಸಿಜನ್‌ಗಳನ್ನು ಶಾಸಕರು ಮತ್ತು ಜಿಲ್ಲಾಡಳಿತ ಪೂರೈಸಿದೆ. ಅಲ್ಲದೇ ಇಡೀ ಜಿಲ್ಲೆಗೆ ಅಗತ್ಯವಿರುವಷ್ಟು ಆಕ್ಷಿಜನ್, ರೆಮಿಡಿಸಿವರ್ ಮತ್ತು ಬೆಡ್‌ಗಳ ವ್ಯವಸ್ಥೆ ಕಲ್ಪಿಸಲು ಹಗಲು-ರಾತ್ರಿ ಶ್ರಮಪಟ್ಟು ಸರ್ಕಾರದ ಜೊತೆ ನಿರಂತರ ವಕಾಲತ್ ವಹಿಸುವ ಮೂಲಕ ಸೌಲಭ್ಯಗಳನ್ನು ತಂದು ಜನರ ಪ್ರಾಣ ಮತ್ತು ಆರೋಗ್ಯವನ್ನು ಕಾಪಾಡಲು ಶಾಸಕರಾದ ಡಾ.ಶಿವರಾಜ್ ಪಾಟೀಲ್ ರವರು ಯಶಸ್ವಿಯಾಗಿದ್ದಾರೆ. ಶಾಸಕರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಒಂದೇ ಒಂದು ಸಾವು ಕೂಡ ಸಂಭವಿಸುವುದಿಲ್ಲ ಎಂಬುದನ್ನು ಕಾಂಗ್ರೆಸ್ಸಿಗರು ಮನಗಾಣಬೇಕಾಗಿದೆ.
ರಿಮ್ಸ್ ಆಸ್ಪತ್ರೆಯಲ್ಲಿನ ಸ್ವಚ್ಛತಾ ಕಾರ್ಯದ ಬಗ್ಗೆ ಶಾಸಕರು ದಿನನಿತ್ಯ ನಿಗಾ ವಹಿಸಿದ್ದಾರೆ. ಯಾರಿಗೂ ದುಡ್ಡು ಕೊಟ್ಟು ಕೋವಿಡ್ ವಾರ್ಡ್‌ಗಳಿಗೆ ಸಂಬಂಧವಿಲ್ಲದ ಶೌಚಾಲಯಗಳ ಫೋಟೋ ಪಡೆದು ಫೇಸ್ ಬುಕ್ ಮತ್ತು ವಾಟ್ಸಾಪ್ಡಗಳಲ್ಲಿ ಹರಿಬಿಟ್ಟು ಹಗಲು, ರಾತ್ರಿ ಸ್ವಚ್ಛತಾ ಕಾರ್ಯ ಮಾಡುವ ಸಿಬ್ಬಂದಿಯನ್ನು ಅವಮಾನಿಸಿರುವುದು ನೀಚತನವಲ್ಲದೇ ಇನ್ನೇನು ಎಂದು ಭಾವಿಸಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸದ ರವಿ ಬೋಸರಾಜ್ ರವರನ್ನು ರಿಮ್ಸ್ ಆಸ್ಪತ್ರೆ ಒಳಗಡೆ ಬಿಡಲು ಹೇಗೆ ಸಾಧ್ಯ ಎಂಬುದು ನಿಮಗೆ ತಿಳಿದಿಲ್ಲವೇ ಎಂದು ಧೋತರ ಬಂಡಿಯವರನ್ನು ಕುಟುಕಿದ್ದಾರೆ.
ನಿನ್ನೆ ನಿಮ್ಮ ನಾಯಕ ಪತ್ರಿಕೆಯೊಂದರಲ್ಲಿ ಜಾಹಿರಾತು ನೀಡಿ ಜನರಲ್ಲಿ ಶಾಸಕರ ಬಗ್ಗೆ ತಪ್ಪು ಭಾವನೆ ಮೂಡಿಸುವ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿರುವುದನ್ನು ಗಮನಿಸಿದರೇ, ಜನರ ಆರೋಗ್ಯ ಮತ್ತು ಪ್ರಾಣಕ್ಕಿಂತ ಅವರ ರಾಜಕೀಯ ಅಜೆಂಡಾ ಜಾರಿಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಪ್ರಜ್ಞಾವಂತ ರಾಯಚೂರಿನ ಜನರು ಗಮನಿಸಿದ್ದಾರೆ. ಇಂತಹ ಕೀಳು ಮಟ್ಟದ ರಾಜಕೀಯ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ದನ್ನು ಬಿಟ್ಟು ಶಾಸಕರು ಮತ್ತು ಜಿಲ್ಲಾಡಳಿತ ಜೊತೆ ಸೇರಿ ಕೋವಿಡ್ ವಿರುದ್ಧದ ಸಮರದಲ್ಲಿ ಕೈಜೋಡಿಸಲಿ ಎಂದು ಸಂಜೀವ್ ರೆಡ್ಡಿ ಹೇಳಿದ್ದಾರೆ.