ರವಿ ಬೆಳಗೆರೆ ನಿಧನಕ್ಕೆ ನರೇಂದ್ರಬಾಬು ಸಂತಾಪ

ಕೋಲಾರ, ನ.೧೫- ತನ್ನದೇ ಆದ ವಿಶಿಷ್ಟ, ವಿಭಿನ್ನ, ಪ್ರತ್ಯೇಕ ನಿರೂಪಣಾ ಶೈಲಿಯಿಂದ ಓದುಗರ ಮನ ಸೂರೆಗೊಂಡಿದ್ದ, ಪ್ರತಿ ಆಗು ಹೋಗುಗಳನ್ನು ತನ್ನದೇ ದೃಷ್ಟಿಕೋನದಿಂದ ವಿಶ್ಲೇಷಿಸಿ, ಹೊಸ ಪದ ಪ್ರಯೋಗಕ್ಕೆ ನಾಂದಿ ಹಾಡಿದ್ದ, ಅಪರೂಪದ ವ್ಯಕ್ತಿತ್ವದ ಪತ್ರಕರ್ತ, ಸಂಪಾದಕ, ಕಥೆಗಾರ, ಚಿತ್ರಕತೆ ಬರಹಗಾರ, ವಿಮರ್ಶಕ, ನಿರ್ದೇಶಕ, ನಟ, ಹಾಗೂ ಕನಸುಗಾರ ರವಿ ಬೆಳಗೆರೆ ಅಗಲಿಕೆಯು ಕನ್ನಡ ಸಾರಸ್ವತ ಲೋಕಕ್ಕೇ ತೀರಲಾರದ ಹಾಗೂ ಅಷ್ಟೇ ಭರಿಸಲಾರದ ನಷ್ಟವಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷ ಹಾಗೂ ವಕೀಲ ಕೆ.ನರೇಂದ್ರಬಾಬು ಸಂತಾಪ ವ್ಯಕ್ತ ಪಡೆಸಿದರು.
ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆ ಹಾಗೂ ಪೊಲೀಸ್ ಐ ಗ್ರೂಪ್‌ನಿಂದ ಶುಕ್ರವಾರದಂದು ಏರ್ಪಡಿಸಿದ್ದ ಪತ್ರಕರ್ತ ರವಿ ಬೆಳಗೆರೆ ರವರಿಗೆ ಭಾವಪೂರ್ವಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ.ಪ್ರತಿ ಹುಟ್ಟು, ಸಾವು ಸ್ವಾಭಾವಿಕ. ಅವು ಸಮಾಜದ ಮೇಲೆ ಸಾಕಷ್ಟು ಬಾರಿ ಯಾವುದೇ ಪರಿಣಾಮ ಬೀರಿರವುದಿಲ್ಲ. ಆದರೆ ಕೆಲವರ ಹುಟ್ಟು, ಸಾವು ವಿಶೇಷವೆನಿಸಿರುತ್ತದೆ. ಇದೇ ರೀತಿ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಹಿರಿಯ ಪತ್ರಕರ್ತ ರವಿ ಬೆಳಗೆರೆ ಈವರೆವಿಗೂ ನಮ್ಮೊಡನಿದ್ದಿದ್ದು ನಿಜಕ್ಕೂ ವಿಶೇಷವಾಗಿದೆ. ಅವರು ಉಲಿಯುತ್ತಿದ್ದ ಉರ್ದು ಗಜಲುಗಳು ಆಲಿಸಲು ಆಪ್ಯಾಯವೆನಿಸಿದ್ದರೂ ವಿಶೇಷ ಹಾಗೂ ಆಯಾ ಸಾಂದರ್ಭಿಕ ಎಂಬುದು ಇನ್ನೂ ಒಂದು ವಿಶೇಷತೆಯಾಗಿರುತ್ತಿತ್ತು ಎಂದರು.
ರವಿ ಬರೆದ ಪ್ರತಿ ಲೇಖನ ಇದು ಅವರದ್ದೇ ಕಲ್ಪನಾ ಉತ್ಪನ್ನವೇ ಎಂದು ಹುಬ್ಬೇರಿಸಿದರೂ ಓದುವುದಕ್ಕೆ ನೀಡುತ್ತಿದ್ದ ಮುಧವೇ ಬೇರೆ ಇರುತ್ತಿತ್ತು. ರವಿ ಕಾಣದ್ದು, ಕವಿ ಕಂಡ ಎನ್ನುತ್ತಾರೆ. ಆದರೆ ಇಲ್ಲಿ ಕವಿ ಕಾಣದ್ದನ್ನೂ ರವಿ ಕಂಡಿದ್ದರು ಎಂಬುದು ಅವರ ಪ್ರತಿ ಲೇಖನಗಳಿಂದ ವ್ಯಕ್ತವಾಗುತ್ತದೆ ಎಂದರು.ಅವರು ೧೯೯೫ರಲ್ಲಿ ಶುರು ಮಾಡಿದ ಹಾಯ್ ಬೆಂಗಳೂರು ಆವರೆವಿಗೂ ಇದ್ದ ಮಡಿವಂತಿಕೆ ಛಳಿಯನ್ನು ತನ್ನ ಹೊಸ ಪ್ರಯೋಗದಿಂದ ಬಿಡಿಸಿತ್ತು ಎಂದರೆ ಸುಳ್ಳಲ್ಲ. ಪ್ರತಿ ವಾರದ ಅಚ್ಚರಿ ಎಂದು ಅವರೇ ತಮ್ಮ ವಾರಪತ್ರಿಕೆ ಮೇಲೆ ಅಚ್ಚೊತ್ತಿಸಿದ್ದರು. ಪಾಪಿಗಳ ಲೋಕದಲ್ಲಿ ಎಂಬ ಧಾರಾವಾಹಿ ಭೂಗತ ಲೋಕದ ಇನ್ನೊಂದು ಮಜಲನ್ನು ಅನಾವರಣಗೊಳಿಸಿತ್ತು. ಅವರು ದುಡ್ಡು ಮಾಡಿದರೋ ಇಲ್ಲವೋ ಆದರೆ ಅವರಿದ್ದರು ಎಂದು ಅವರು ನೆಟ್ಟಿ ಹೋದ ತಮ್ಮ ಮೈಲಿಗಲ್ಲು ಬಹುಶಃ ಸಾರ್ವತ್ರಿಕವೆನಿಸುವುದು ಎಂದು ಹೇಳಿದರು.
ರವಿ ಬೆಳಗೆರೆಯವರ ಪ್ರತಿ ವಿಷಯ ವಸ್ತುವಿಗೂ ಇದ್ದ ಪ್ರತ್ಯೇಕ ದೃಷ್ಟಿಕೋನ, ಅದನ್ನು ಅವರು ನಿರೂಪಿಸುವ ಪರಿ, ಅದಕ್ಕಾಗಿ ಅವರು ಬಳಸುವ ಪದಪುಂಜ, ಸದರಿ ವಿಷಯ ವಸ್ತುವಿಗೆ ಅವರೇ ಸೃಷ್ಟಿಸುವ ಹೊಸತೊಂದು ಸ್ಥಾನ-ಮಾನವು ಅವರಿಗಷ್ಟೇ ಸಾಧ್ಯ. ಇನ್ನೊಬ್ಬ ರವಿಬೆಳಗೆರೆ ಹುಟ್ಟಿ ಬರಲು ಸಾಧ್ಯವೇ ಇಲ್ಲ. ಅವರು ಖಾಲಿ ಮಾಡಿ ಹೋದ ಸ್ಥಾನ ಇನ್ನೆಂದಿಗೂ ಖಾಲಿಯಾಗಿಯೇ ಉಳಿಯುವುದು. ಅದೇ ರವಿ ಬೆಳಗೆರೆ ಎಂಬ ಕನ್ನಡ ಸಾಕ್ಷರತಾ ಜಾದೂಗಾರನ ವೈಶಿಷ್ಟ್ಯತೆ ಎಂದರು.
ಪೊಲೀಸ್ ಐ ಗ್ರೂಪ್‌ನ ಫಿರ್ಧೋಸ್ ಪಠಾನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೋಲಾರ್ ಟ್ರೂ ನ್ಯೂಸ್ ಯೂ ಟ್ಯೂಬರ್ ಅಯೂಬ್ ಪಾಷ, ಜಯಕರ್ನಾಟಕ ಮುಖಂಡ ಐಸ್ ನಾಗರಾಜ್, ನವೀನ್, ವಿಶ್ವನಾಥ್, ಸುಬ್ಬಕ್ಕ ಕಾಂಡಿಮೆಂಟ್ಸ್ ವೆಂಕಟ್, ಷಬ್ರೀಕ್, ಸಾದತ್, ಕೃಷ್ಣಸ್ವಾಮಿ, ಅರ್ಬಾತ್, ಹೆಲ್ತ್ ಕೇರ್ ಡಯಗ್ನೋಸ್ಟಿಕ್ ದೀಪಕ್ ಸುನಿಲ್ ಮುಂತಾದವರು ಇದ್ದರು.