ರವಿಬೆಳಗೆರೆ ನಿಧನಕ್ಕೆ ಸಂತಾಪ

ಬಳ್ಳಾರಿ ನ.14, ಹಿರಿಯ ಪತ್ರಕರ್ತ, ಸಾಹಿತಿ ರವಿಬೆಳಗೆರೆಯವರ ನಿಧನಕ್ಕೆ ನಗರದ ಕನ್ನಡ ಭವನದಲ್ಲಿ ನಿನ್ನೆ ಸಂಜೆ ಸಂತಾಪ ಸಭೆ ನಡೆಯಿತು. ಬೆಳಗೆರೆಯವರ ನಿಕಟವರ್ತಿ ರೈಲ್ವೆ ಕ್ರಿಯಾ ಸಮಿತಿಯ ಸಂಚಾಲಕ ಕೆ.ಎಂ.ಮಹೇಶ್ವರಸ್ವಾಮಿ ಸಭೆಯಲ್ಲಿ ಅವರು ಮಾತನಾಡಿ, ರವಿ ಬೆಳಗೆರೆಯವರು ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ತಮ್ಮ ಬರವಣಿಗೆಯ ಮೂಲಕ ಇಡೀ ನಾಡಿನ ಓದುಗರನ್ನು ಸೆಳೆದಿದ್ದು ವಿಶಿಷ್ಟವಾಗಿದೆಂದರು.
ಲೇಖಕ ವೈ.ಹನುಮಂತರೆಡ್ಡಿ ಅವರು, ರವಿಯವರು ತಮ್ಮ ಬರವಣಿಗೆಯ ಮಾಂತ್ರಿಕ ಶಕ್ತಿಯಿಂದ ಯುವಜನರನ್ನು ಆಕರ್ಷಿಸಿದ್ದರೆಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಅವರು, ರವಿಬೆಳಗೆರೆಯವರು ಕೇವಲ ಪತ್ರಕರ್ತರು ಮಾತ್ರವಲ್ಲ 80ಕ್ಕೂ ಅಧಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅಂಕಣಗಳ ಮೂಲಕ ತಮ್ಮ ಈ ಗಡಿನಾಡಿನ ಸೊಗಡನ್ನು ಭಾಷೆಯ ವೈಶಿಷ್ಟ್ಯತೆಯನ್ನು ಕಟ್ಟಿಕೊಟ್ಟಿದ್ದಾರೆಂದರು.
ಕಾರ್ಯಕ್ರಮದಲ್ಲಿ ಕಸಾಪ ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ್, ಗೌರವ ಕಾರ್ಯದರ್ಶಿ ಕೋಳೂರು ಚಂದ್ರಶೇಖರಗೌಡ, ವೀರೇಶ್ ಕರಡಕಲ್, ಕಸಾಪ ತಾಲ್ಲೂಕು ಅಧ್ಯಕ್ಷ ಕೆ.ಸುಂಕಪ್ಪ, ಡಾ.ಕೆ.ಬಸಪ್ಪ, ಕಸಾಪ ಸಂಘಟನಾ ಕಾರ್ಯದರ್ಶಿ ದಿವಾಕರ ನಾರಾಯಣ, ಹೆಚ್.ಎಂ.ಅಮರೇಶ್, ಮಾತನಾಡಿದರು. ಕಸಾಪ ಗೌರವ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.