ರವಾ ಬರ್ಫಿ

ಬೇಕಾಗುವ ಸಾಮಗ್ರಿಗಳು:
ರವಾ: ಒಂದು ಕಪ್
ತುಪ್ಪ: ಕಾಲು ಕಪ್
ಕಾಯಿತುರಿ: ಕಾಲು ಕಪ್
ಹಾಲು : ಎರಡು ಕಪ್
ಸಕ್ಕರೆ : ಒಂದು ಕಪ್
ಬಾದಾಮಿ : ಒಂದು ಹಿಡಿ
ಗೋಡಂಬಿ -:ಒಂದು ಹಿಡಿ
ಏಲಕ್ಕಿ ಪುಡಿ : ಅರ್ಧ ಚಮಚ

ಮಾಡುವ ವಿಧಾನ:
ಒಂದು ಪ್ಯಾನ್‌ಗೆ ಕಾಲು ಕಪ್ ತುಪ್ಪ ಮತ್ತು ರವೆಯನ್ನು ಹಾಕಿ ಚಿಕ್ಕ ಉರಿಯಲ್ಲಿ ಐದು ನಿಮಿಷ ಹುರಿಯಿರಿ. ರವೆ ಹುರಿದ ಪರಿಮಳ ಬರುತ್ತಿದ್ದಂತೆಯೇ ಕಾಯಿ ತುರಿಯನ್ನು ಹಾಕಿ ಎರಡು ನಿಮಿಷ ಹುರಿದು ಅದನ್ನು ಒಂದು ಬೌಲ್‌ನಲ್ಲಿ ಹಾಕಿಟ್ಟುಕೊಳ್ಳಿ. ಈಗ ಅದೇ ಪ್ಯಾನ್‌ನಲ್ಲಿ ಹಾಲನ್ನು ಹಾಕಿ ಕುದಿಸಿ. ಹಾಲನ್ನು ಕುದಿಸುವಾಗ ಆಗಾಗ ಕೈಯಾಡಿಸುತ್ತಿರಿ. ಹಾಲನ್ನು ಚೆನ್ನಾಗಿ ಕುದಿಸಿದ ನಂತರ ಈಗಾಗಲೇ ಹುರಿದಿಟ್ಟ ರವೆಯನ್ನು ಹಾಕಿ ಗಂಟುಗಳಾಗದಂತೆ ಚೆನ್ನಾಗಿ ಮಿಕ್ಸ್ ಮಾಡಿ. ರವೆ ಹಾಲನ್ನು ಹೀರಿಕೊಂಡು ಚೆನ್ನಾಗಿ ಬೆಂದು ತಳವನ್ನು ಬಿಡುವವರೆಗೂ ನಿರಂತರವಾಗಿ ಮಿಕ್ಸ್ ಮಾಡುತ್ತಿರಿ. ಈಗ ಇದಕ್ಕೆ ಸಕ್ಕರೆ, ತರಿತರಿಯಾಗಿ ರುಬ್ಬಿಕೊಂಡ ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ ಮಿಕ್ಸ್ ಮಾಡಿ. ಸಕ್ಕರೆಯು ಕರಗಿ ಚೆನ್ನಾಗಿ ಹೊಂದಿಕೊಂಡ ನಂತರ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣ ಪ್ಯಾನ್‌ನ ತಳವನ್ನು ಸಂಪೂರ್ಣವಾಗಿ ಬಿಟ್ಟು ಗಟ್ಟಿಯಾಗುವವರೆಗೆ ಕೈಯಾಡಿಸಿ ನಂತರ ಸ್ಟೌ ಆಫ್ ಮಾಡಿ. ಈ ಮಿಶ್ರಣವನ್ನು ಒಂದು ಪ್ಲೇಟ್‌ನಲ್ಲಿ ಹಾಕಿ ಸಮತಟ್ಟಾಗಿಸಿ. ನಂತರ ಬಾದಾಮಿ ಮತ್ತು ಗೋಡಂಬಿ ಚೂರುಗಳನ್ನು ಅದರ ಮೇಲೆ ಹಾಕಿ ಪ್ರೆಸ್ ಮಾಡಿ. ಐದು ನಿಮಿಷ ಬಿಟ್ಟು ಅದನ್ನು ನಿಮಗೆ ಬೇಕಾದ ಆಕಾರ ಮತ್ತು ಗಾತ್ರದಲ್ಲಿ ಕಟ್ ಮಾಡಿಕೊಂಡರೆ ರವಾ ಬರ್ಫಿ ರೆಡಿಯಾಗುತ್ತದೆ.