ರಮ್ಯಾ-ಅಶೋಕ್ ವಾಕ್ಸಮರ

ಬೆಂಗಳೂರು,ಏ.೨೩- ಬಿಜೆಪಿಗೆ ಬನ್ನಿ ನಾಳೆಯೇ ನಿಮ್ಮನ್ನು ಮಂತ್ರಿ ಮಾಡ್ತೀವಿ ಎಂದು ಬಿಜೆಪಿಯ ನಾಯಕರೊಬ್ಬರು ಆಫರ್ ಕೊಟ್ಟಿದ್ದರು ಎನ್ನುವ ಸಂಗತಿಯನ್ನು ಮಾಜಿ ಸಂಸದೆ ಸಂಸದೆ ಹಾಗೂ ಚಿತ್ರನಟಿ ರಮ್ಯಾ ಬಹಿರಂಗ ಮಾಡಿದ್ದಾರೆ
ಬಿಜೆಪಿ ನಾಯಕರ ಆಹ್ವಾನವನ್ನು ನಿರಾಕರಿಸಿದ್ದಾಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ನನಗೆ ಬಿಜೆಪಿ ಮೇಲೆ ದ್ವೇಷ ಇಲ್ಲ. ಆದರೆ, ಅವರ ಕೆಲವೊಂದು ಸಿದ್ಧಾಂತಗಳಿಗೆ ನನ್ನ ವಿರೋಧವಿದೆ ಎಂದು ಹೇಳಿದ್ದಾರೆ.
ಸಿನಿಮಾ ನಟರನ್ನು ಚುನಾವಣಾ ಪ್ರಚಾರಕ್ಕೆ ಕರೆ ತಂದರೆ ಜನ ಸೇರುತ್ತಾರೆ. ಜನರನ್ನು ಸೇರಿಸಲು ಹಣ ನೀಡಬೇಕಾಗುತ್ತದೆ, ಅದರ ಬದಲು ಸ್ಟಾರ್ ನಟ-ನಟಿಯರನ್ನು ಕರೆತಂದರೆ ಜನರು ತಾವಾಗಿಯೇ ಬರುತ್ತಾರೆ ಎಂದು ಅಂದುಕೊಂಡಿದ್ದಾರೆ. ನಟ ಅಥವಾ ನಟಿಯರು ಹೇಳಿದ ಮಾತ್ರಕ್ಕೆ ಜನರು ಓಟು ಹಾಕುವುದಿಲ್ಲ ಎಂದಿದ್ದಾರೆ.
ಓಟು ಹಾಕಲ್ಲ:
ಸಿನಿಮಾ ತಾರೆಯರು ಬಂದರೆ ಜನ ಸೇರಬಹುದು, ಆದರೆ ಓಟು ಹಾಕಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಪರ ಸುದೀಪ್ ಪ್ರಚಾರದ ಕುರಿತು ತಿರುಗೇಟು ನೀಡಿದ್ದಾರೆ.
ಬಿಜೆಪಿ ಪರ ಪ್ರಚಾರ ಸುದೀಪ್ ರ ವೈಯಕ್ತಿಕ ಆಯ್ಕೆ. ಅವರಿಗೆ ಬೇರೆ ಪಕ್ಷಗಳಿಂದವೂ ಆಫರ್ ಗಳು ಬಂದಿದ್ದವು. ಈ ಬಗ್ಗೆ ನಾವು ಚರ್ಚೆ ಮಾಡಿದ್ದೆವು. ಮುಖ್ಯಮಂತ್ರು ಬಸವರಾಜ ಬೊಮ್ಮಾಯಿ ಅವರಿಗೆ ಬಹಳ ಆತ್ಮೀಯರಾಗಿರುವ ಕಾರಣ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಅಷ್ಟೇ ಎಂದರು.
ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ತಾರಾ ನಟರನ್ನು ತಮ್ಮತ್ತ ಸೆಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ನಟಿ ರಮ್ಯಾ ಅವರೇ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

ಅಶೋಕ್ ತಿರುಗೇಟು
ಮಾಜಿ ಸಂಸದೆ ಹಾಗೂ ನಟಿ ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ಪಕ್ಷ ಬರಗೆಟ್ಟಿಲ್ಲ ಎಂದು ಕಂದಾಯ ಸಚಿವ ಅಶೋಕ್ ತಿರುಗೇಟು ನೀಡಿದ್ದಾರೆ.
ನನಗೂ ಬಿಜೆಪಿಯಿಂದ ಆಹ್ವಾನವಿತ್ತು ಎಂಬ ನಟಿ ರಮ್ಯಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಟಿ ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ಪಕ್ಷ ಬರಗೆಟ್ಟಿಲ್ಲ, ಪಕ್ಷಕ್ಕೆ ರಮ್ಯಾ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ನಟಿ ರಮ್ಯಾ ಅವರನ್ನು ಬಿಜೆಪಿಗೆ ಬರುವಂತೆ ಬಿಜೆಪಿ ಯಾವ ನಾಯಕರು ಆಹ್ವಾನಿಸಿದ್ದರೋ ತಮಗೆ ತಿಳಿದಿಲ್ಲ ಎಂದರು.
ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳು ನಟ,ನಟಿಯರನ್ನು ತಮ್ಮ ಪಕ್ಷಕ್ಕೆ ಆಹ್ವಾನ ಮಾಡುತ್ತಿರುವ ನಡುವೇ ರಮ್ಯಾ ಹೇಳಿಕೆ ಸಂಚಲನ ಮೂಡಿಸಿದೆ.
ಇದರಿಂದ ಆದ ಮುಜುಗರ ತಪ್ಪಿಸಿಕೊಳ್ಳಲು ಸಚಿವ ಆರ್. ಅಶೋಕ್ ಅವರು ರಮ್ಯಾ ಅವರನ್ನು ಬಿಜೆಪಿಗೆ ಆಹ್ವಾನಿಸಿಲ್ಲ ಎಂದಿದ್ದಾರೆ.