ರಮೇಶ ಕುಮಾರ : ಪತ್ರಕರ್ತರ ಮೇಲೆ ಹಲ್ಲೆ ಖಂಡನೆ

ಲಿಂಗಸುಗೂರು.ಆ.೦೧-ಕೋಲಾರದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶಕುಮಾರ ಅವರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ.
ಕೋಲಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಪೂರ್ವಭಾವಿ ಸಭೆ ನಡೆದಿತ್ತು. ಸಭೆಯಲ್ಲಿ ರಮೇಶಕುಮಾರ ಬೆಂಬಲಿಗರು ಮತ್ತು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲಿಗರ ನಡುವೆ ತಿಕ್ಕಾಟ ನಡೆದು ಪರಿಸ್ಪರ ಕೈ ಮಿಲಾಯಿಸುವ ಹಂತ ತಲುಪಿತ್ತು.
ಈ ಘಟನೆಯ ಚಿತ್ರೀಕರಣ ಮಾಡುವ ವೇಳೆ ಇಬ್ಬರು ಪತ್ರಕರ್ತರನ್ನು ತಳ್ಳಿ ರಮೇಶಕುಮಾರ ಹಲ್ಲೆ ನಡೆಸಿರುವದು ಖಂಡನೀಯ ಕೆ.ಆರ್.ರಮೇಶ ಕುಮಾರ ಓರ್ವ ಜನಪ್ರತಿನಿಧಿಯಾಗಿ ತಮ್ಮ ಸ್ಥಾನದ ಜವಾಬ್ದಾರಿ ಮರೆತು ಗೂಂಡಾವರ್ತನೆ ತೋರಿ, ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಪ್ರತಿನಿತ್ಯವು ರಾಜ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಘಟನೆಗಳು ನಡೆಯುತ್ತಿದ್ದು, ಅಭದ್ರತೆಯಲ್ಲಿ ಪತ್ರಕರ್ತರು ಕೆಲಸ ಮಾಡುವಂತ ಸ್ಥಿತಿ ಇದೆ.
ವೈದ್ಯರ ರಕ್ಷಣೆ ಕಾಯ್ದೆ ಮಾದರಿಯಲ್ಲಿ ಪತ್ರಕರ್ತರ ರಕ್ಷಣೆಗೆ ಕಾಯ್ದೆ ಜಾರಿಗೆ ಮುಂದಾಗಬೇಕು. ತಾಲೂಕು ಮಟ್ಟದ ಮಾಧ್ಯಮ ಸಮಿತಿ ಸಭೆ ಕೂಡಲೇ ಕರೆಯಬೇಕು. ಪತ್ರಕರ್ತರಿಗೆ ಇ-ಶ್ರಮ ಯೋಜನೆಯಡಿ ನೊಂದಣಿಗೆ ಅವಕಾಶ ನೀಡಬೇಕು. ಬಾಕಿಯಿರುವ ಪತ್ರಕರ್ತರ ಕುಟುಂಬಗಳಿಗೆ ಆರೋಗ್ಯ ಕರ್ನಾಟಕ ಕಾರ್ಡ್ ನೀಡಬೇಕು.
ಪತ್ರಕರ್ತರ ಮೇಲೆ ಹಲ್ಲೆಗೆ ಮುಂದಾಗಿರುವ ಮಾಜಿ ಸಚಿವ ಕೆ.ಆರ್.ರಮೇಶ ಕುಮಾರ ಕೂಡಲೇ ಪತ್ರಕರ್ತರ ಕ್ಷಮೆ ಕೇಳಬೇಕು ಮತ್ತು ರಮೇಶ ಕುಮಾರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಒತ್ತಾಯಿಸುತ್ತದೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತ ಸಂಘ ತಾಲ್ಲೂಕು ಲಿಂಗಸುಗೂರ ಘಟಕ ಲಿಂಗಸುಗೂರ ಸಹಾಯಕ ಆಯುಕ್ತರ ಮೂಲಕ ಬಸವರಾಜ ಬೊಮ್ಮಾಯಿಯವರು ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಇವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ.ಕಾ.ಪ.ಸಂ.ತಾ. ಅಧ್ಯಕ್ಷರಾದ ಗುರುರಾಜ ಗೌಡೂರು, ಅಮರಯ್ಯ ಘಂಟಿ ಪ್ರಧಾನ ಕಾರ್ಯದರ್ಶಿ ಬಿಎ ನಂದಿಕೊಲಮಠ ಶಿವರಾಜಕೆಂಬಾವಿ, ದುರಗಪ್ಪ ಹೊಸಮನಿ, ಖಾಜಾಹುಸೇನ್, ಡಾ.ಶರಣಪ್ಪ ಆನಾಹೊಸುರ, ಹನುಮಂತ ನಾಯಕ, ಹನುಮಂತ ಕನ್ನಾಳ, ಪಂಪಾಪತಿ ಭಜಂತಿ, ಗೌತಮ್, ಬಸವರಾಜ ಹೂನೂರ, ರವಿ ಹೊಸಮನಿ ಸೇರಿದಂತೆ ತಾಲ್ಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.