ರಮೇಶ್ ಮೋಸ ಕಾಂಗ್ರೆಸ್‌ನಲ್ಲಿ ಇದ್ದಾಗ ಏಕೆ ಹೇಳಲಿಲ್ಲ ;ಈಶ್ವರಪ್ಪ

ಬೆಳಗಾವಿ, ನ.೨೮- ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಆ ಪಕ್ಷಕ್ಕೆ ಮೋಸ ಮಾಡುತ್ತಿದ್ದಾರೆ ಎಂಬುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗಲೇ ಏಕೆ ಹೇಳಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ತೊರೆದ ನಂತರ ಎಲ್ಲವೂ ನೆನಪಾಗಿದೆ. ಸತ್ಯವನ್ನು ಯಾವಾಗಲು ಸ್ಪಷ್ಟವಾಗಿ ಹೇಳಿದರೆ ಅದು ಸತ್ಯವಾಗುತ್ತಿದೆ. ತಮಗೆ ಬೇಕಾದಂತೆ ತಿರುಚಿದರೆ ಅದು ಸತ್ಯವಾಗಲ್ಲ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಬಿಜೆಪಿಗೆ ಮೋಸ ಮಾಡುವುದಿಲ್ಲ. ವಿಧಾನ ಪರಿಷತ್ ಚುನಾವಣೆಯಲಿ ದ್ವಿಸದಸ್ಯ ಸ್ಥಾನವಿದೆ. ಮೊದಲನೆ ಪ್ರಾಶಸ್ತ್ಯದ ಮತ ಬಿಜೆಪಿಗೆ ಕೊಡಿ. ೨ನೇ ಪ್ರಾಂಸ್ತ್ಯದ ಮತ ತಮ್ಮ ಸಹೋದರ ಲಖನ್ ಅವರಿಗೆ ನೀಡುವಂತೆ ಬಹಿರಂಗವಾಗಿಯೇ ಮನವಿ ಮಾಡುತ್ತಿದ್ದಾರೆ. ಇದನ್ನು ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿರುಗೇಟು ನೀಡಿದರು. ಎಲ್ಲ ಇಲಾಖೆಗಳಲ್ಲೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ಈ ವಿಚಾರದಲ್ಲಿ ವಿನಾಕಾರಣ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ಮಾಡುತ್ತಿರುವ ಟೀಕೆಯಲ್ಲಿ ಸತ್ಯವಿದ್ದರೆ ಪರಿಗಣಿಸಿ ತಿದ್ದಿಕೊಳ್ಳುತ್ತೇವೆ ಎಂದರು.
ಕಾಮಗಾರಿಗಳ ಟೆಂಡರ್‌ನಲ್ಲಿ ಶೇ. ೪೦ ರಷ್ಟು ಲಂಚ ಪಡೆಯಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಟೆಂಡರ್‌ಗಳ ಬಗ್ಗೆಯೂ
ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.