ರಮೇಶ್, ಮುನಿಯಪ್ಪ ಬಣ ಪ್ರತ್ಯೇಕ ಧರಣಿ

ಕೋಲಾರ, ಜು. ೨೨: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವುದನ್ನು ವಿರೋಧಿಸಿ ಒಂದೇ ಸ್ಥಳದಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಬಣ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬಣ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.
ಗಾಂಧಿ ವನದ ಬಳಿ ಇಂದು ಮುನಿಯಪ್ಪ ನೇತೃತ್ವದಲ್ಲಿ ಸೇರಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಎಂಎಲ್ಸಿ ನಾರಾಯಣ ಸ್ವಾಮಿ, ಬಾಗೇಪಲ್ಲಿ ಮಾಜಿ ಶಾಸಕ ಸಂಪಂಗಿ ಜೊತೆಗಿದ್ದರು.
ಕೇಂದ್ರ ಸರ್ಕಾರ ದ್ವೇಷ ರಾಜಕಾರಣದಲ್ಲಿ ತೊಡಗಿದೆ. ಸೋನಿಯಾ ಗಾಂಧಿ ಅವರಿಗಾಗಿ ಪ್ರಾಣ ನೀಡಲು ಸಿದ್ಧ’ ಎಂದು ಮುನಿಯಪ್ಪ ಹೇಳಿದರು.ಪಕ್ಕದಲ್ಲೇ ರಮೇಶ್ ಕುಮಾರ್ ನೇತೃತ್ವದಲ್ಲಿ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಉಭಯ ಬಣದವರು ಕೇಂದ್ರ ಸರ್ಕಾರದ ವಿರುದ್ಧ ಪೈಪೋಟಿಯಿಂದ ಘೋಷಣೆ ಕೂಗಿದರು. ಈ ಹಂತದಲ್ಲಿ ಉಭಯ ಬಣಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು.