ರಮೇಶ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಮಾ.29:- ಸಿಡಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಾಗೂ ಡಿಕೆ ಶಿವಕುಮಾರ್ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಂಧನಕ್ಕೆ ಆಗ್ರಹಿಸಿ, ಶಾಸಕ ಸ್ಥಾನ ಅನರ್ಹಗೊಳಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಹಾಗೂ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಹಾಗೂ ಡಿ ಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ನಗರ ಕಾಂಗ್ರೆಸ್ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಇದು ಸಿಡಿ ಸರ್ಕಾರ ಎಂದು ಕೈ ಕಾರ್ಯಕರ್ತರು ಘೋಷಣೆ ಕೂಗಿದರು.ಪ್ರಕರಣ ಬೆಳಕಿಗೆ ಬಂದು 24 ದಿನವಾದರೂ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದಿದ್ದರೆ ಬಂಧನ ಆಗಿರುತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಲ್ಯಾಕ್ ಮಾಜಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ ಇಂದು ಈ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇದೆಯಾ ಎನ್ನುವ ಪ್ರಶ್ನೆ ಬಂದಿದೆ. ರಮೇಶ್ ಜಾರಕಿ ಹೊಳಿಯವರನ್ನು ಬಂಧಿಸದೇನೇ, ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಶಿಕ್ಷೆ ನೀಡದೆಯೇ ಅವರನ್ನು ಸ್ವೇಚ್ಛೆಯಾಗಿ ಬಿಟ್ಟಿದೆ. ಒಂದು ಮೊಕದ್ದಮೆ ದಾಖಲಾದ ಮೇಲೆ ಎಫ್ ಐ ಆರ್ ದಾಖಲಾದ ಮೇಲೆ ಬಂಧಿಸಬೇಕು. ಬಂಧಿಸಿಲ್ಲ. ನಮ್ಮ ಕಾನೂನಿಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ರಮೇಶ್ ಜಾರಕಿಹೊಳಿಯವರಿಗೆ ರಕ್ಷಣೆ ನೀಡುತ್ತಿದೆ. ಇದು ಈ ನೆಲದ ಕಾನೂನಿಗೆ ಮಾಡಿದ ಅಪಚಾರ. ನಿಜವಾಗಲೂ ಹೇಳಬೇಕು ಅಂತಂದರೆ ನೈತಿಕತೆ ಇಲ್ಲದ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು. ರಾಜ್ಯಪಾಲರು ಮಧ್ಯಪ್ರವೇಶಿಸಬೇಕು. ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಬೇಕು.
ಈ ಪ್ರಕರಣ ತೀರ್ಮಾನವಾಗುವವರೆಗೂ ಅವರೆಲ್ಲೂ ಕೂಡ ಶಾಸಕ ಎಂದು ಹೇಳಿಕೊಳ್ಳಲು ಹಕ್ಕಿಲ್ಲ. ಯಾಕೆಂದರೆ ಕಾನೂನಿನ ಚೌಕಟ್ಟಿನಲ್ಲಿ ಶಾಸನ ಮಾಡುವಂತಹವರು ಮಾಡಿದ ಕೃತ್ಯ ಇದೆಯಲ್ಲ ಇದು ನಾಗರಿಕ ಸಮಾಜದ ಲಕ್ಷಣ ಅಲ್ಲ. ಇವತ್ತು ಎಲ್ಲರಿಗೂ ಗಾಬರಿಯಾಗಿದೆ. ರಾಜ್ಯದ ಜನ ಇಷ್ಟೊಂದು ಕೂಗುತ್ತಿದ್ದರೂ ಕೂಡ ರಮೇಶ್ ಜಾರಕಿ ಹೊಳಿ ಮೇಲೆ ಕ್ರಮ ತೆಗೆದುಕೊಳ್ಳದ ಸರ್ಕಾರ ಭಂಡ ಸರ್ಕಾರ, ನೀತಿಗೆಟ್ಟ ಸರ್ಕಾರ, ಲಜ್ಜೆಗೆಟ್ಟ ಸರ್ಕಾರ. ರಾಜ್ಯಪಾಲರು ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರಾಧ್ಯಕ್ಷ ಆರ್.ಮೂರ್ತಿ, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಜಿ.ರಾಘವೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.