ರಮೇಶ್ ಬಂಧನಕ್ಕೆ ಆಗ್ರಹಿಸಿ ಕೈ ಪ್ರತಿಭಟನೆ

Congress workers protest at cubbon in jorkohali issue

ಬೆಂಗಳೂರು, ಮಾ.೨೯- ಸಿ.ಡಿ.ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅನ್ನು ಬಂಧಿಸಬೇಕು ಎಂದು ಆಗ್ರಹಿಸಿ ಠಾಣೆಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ನಗರದಲ್ಲಿಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ಯುವ ಘಟಕದ ನೂರಾರು ಸದಸ್ಯರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಿರುವ ರಮೇಶ್ ಜಾರಕಿಹೊಳಿ ಅವರು ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ರಮೇಶ್ ಜಾರಕಿಹೊಳಿ ಮಾಡಬಾರದ ತಪ್ಪು ಮಾಡಿ ಈಗ ಸಮರ್ಥನೆ ಮಾಡಿಕೊಳ್ಳುತ್ತಿದ್ದು, ಪೊಲೀಸರು ಸ್ವಯಂ ಹೇಳಿಕೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಕೂಡಲೇ ಬಂಧಿಸಬೇಕು. ಅಲ್ಲದೆ, ಮಾಡಬಾರದ ತಪ್ಪು ಮಾಡಿದ ಜಾರಕಿಹೊಳಿ, ಮೂರು ತಿಂಗಳ ಹಿಂದೆಯೇ ಸಿ.ಡಿ. ಬಗ್ಗೆ ಗೊತ್ತಿತ್ತು. ಇದರ ಹೆಸರಲ್ಲಿ ಹಣ ಕೇಳುತ್ತಿದ್ದರು ಎನ್ನುತ್ತಾರೆ. ಇನ್ನೊಂದೆಡೆ ಸಿ.ಡಿ.ಯೇ ನಕಲಿ ಎನ್ನುತ್ತಾರೆ. ನಕಲಿ ಎಂದ ಮೇಲೆ ಏಕೆ ಹಣ ಕೊಡಬೇಕಿತ್ತು ಇವರ ವಿರುದ್ಧ ಐ.ಟಿ. ಮತ್ತು ಇ.ಡಿ. ಏನು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು.
ಮಂತ್ರಿಯಾಗಿ ಇಂತಹ ಕೃತ್ಯ ಎಸಗಿದ್ದಾರೆ ಎಂದರೆ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ ಎಂಬ ಅರ್ಥ ಬರುತ್ತದೆ. ಆದರೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ಹೆಸರಲ್ಲಿ ಇಡೀ ಪ್ರಕರಣದ ದಿಕ್ಕು ತಪ್ಪಿಸುತ್ತಿದೆ. ಎಸ್‌ಐಟಿಯವರು ತನಿಖೆ ನಡೆಸುವುದನ್ನು ಬಿಟ್ಟು ಸಂತ್ರಸ್ತೆ ಕುಟುಂಬದವರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿದರು.
ಡಿ.ಕೆ. ಶಿವಕುಮಾರ್ ವಿರುದ್ಧ ಅವಾಚ್ಯ ಶಬ್ಧದಿಂದ ಮಾತನಾಡಿರುವ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ಮಾತಿನಿಂದ ಇಡೀ ರಾಜ್ಯ ನಗೆಪಾಟಲಿಗೀಡಾಗಿದೆ. ಒಂದು ವೇಳೆ ಅವರು ಡಿಕೆಶಿ ಬಳಿ ಕ್ಷಮೆ ಕೇಳಲಿಲ್ಲವೆಂದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಘೋಷಣೆ ಕೂಗಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಯುವ ಘಟಕದ ಮಿಥುನ್ ರೈ ಮಹಮ್ಮದ್ ನಾಲಪಾಡ್, ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದುರು.