ರಮೇಶ್‍ಜಾರಕೀಹೊಳಿರವರನ್ನು ಬಂಧಿಸಲು ಒತ್ತಾಯ

ಕೆ.ಆರ್.ಪೇಟೆ:ಮಾ:29: ಸಿಡಿ ಕೇಸಿನಲ್ಲಿ ಎಫ್‍ಐಆರ್ ದಾಖಲಾಗಿರುವ ಮಾಜಿ ಸಚಿವ ರಮೇಶ್ ಜಾರಕೀಹೊಳಿ ಅವರನ್ನು ಕೂಡಲೇ ಬಂಧಿಸಬೇಕು. ಸಂತ್ರಸ್ತ ಯುವತಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಾಲೂಕು ಕಾಂಗ್ರೆಸ್ ಘಟಕ ಒತ್ತಾಯಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ರಾದ ಕೆ.ಬಿ.ಚಂದ್ರಶೇಖರ್ ಮತ್ತು ಬಿ.ಪ್ರಕಾಶ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ತಾಲೂಕು ಕಾಂಗ್ರೆಸ್ ಮುಖಂಡರು ಲೈಂಗಿಕ ಹಗರಣ ಹೊರಬಂದ ಪ್ರಕರಣದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ತಳಕು ಹಾಕುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ ಅತಯಾಚಾರ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳ ಹೇಳಿಕೆಯೇ ಅತಿಮುಖ್ಯ. ರಮೆಶ್ ಜಾರಕಿಹೊಳಿ ಪ್ರಕರಣದಲ್ಲಿ ಲೈಂಗಿಕ ಶೋಷಣೆಗೆ ಒಳಗಾದ ಹೆಣ್ಣುಮಗಳೇ ನನಗೆ ಉದ್ಯೋಗದ ಆಸೆ ತೋರಿಸಿ ಒಂದಲ್ಲ ಎರಡು ಸಲ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆಂದು ನೇರ ಹೇಳಿಕೆ ನೀಡಿದ್ದಾಳೆ. ಈ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿರುವ ಪೋಲಿಸರು ಆರೋಪಿ ರಾಜಾರೋಷವಾಗಿ ತಿರುಗಾಡುತ್ತಾ ರಾಜ್ಯ ಸರ್ಕಾರವನ್ನೆ ಬುಡಮೇಲು ಮಾಡುವ ಬೆದರಿಕೆ ಹಾಕುತ್ತಿದ್ದರೂ ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ. ಲೈಂಗಿಕ ಹಗರಣದ ಪ್ರಕರಣದಲ್ಲಿ ಶ್ರೀಸಾಮಾನ್ಯರ ವಿರುದ್ದ ದೂರು ದಾಖಲಿಸಿದ ಮರು ಕ್ಷಣವೇ ಆರೋಪಿಗಳನ್ನು ಜೈಲಿಗಟ್ಟುವ ಪೊಲೀಸರು ಜಾರಕಿಹೊಳಿ ಪ್ರಕರಣದಲ್ಲಿ ಮಾತ್ರ ಯಾವುದೇ ಕ್ರಮ ಜರುಗಿಸದೆ ಆರೋಪಿಯ ರಕ್ಷಣೆ ಮಾಡುತ್ತಿದ್ದಾರೆಂದರು.
ಡಿಕೆಶಿ ರಕ್ಷಣೆ ನೀಡಿದರೆ ತಪ್ಪೇನು?: ಡಿ.ಕೆ. ಶಿವಕುಮಾರ್ ರಾಜ್ಯದ ಪ್ರಬಾವಿ ನಾಯಕ ಮತ್ತು ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷ. ಖ.ಕೆ.ಶಿ ಮನೆಗೆ ನಿತ್ಯ ಸಾವಿರಾರು ಜನ ತಮ್ಮ ಕಷ್ಠ ಪರಿಹಾರ ಹೇಳಿಕೊಳ್ಳಲು ಬಂದು ಹೋಗು ತ್ತಾರೆ. ಸಂತ್ರಸ್ತ ಯುವತಿ ತನ್ನ ಮೇಲೆ ನಡೆದ ದೌರ್ಜನ್ಯಕ್ಕೆ ನ್ಯಾಯದೊರಕಿಸಿಕೊಳ್ಳಲು ಡಿಕೆಶಿ ಮನೆಗೆ ಬಂದಿರಬಹುದು. ಇದರಲ್ಲಿ ತಪ್ಪೇನು?. ದೌರ್ಜನ್ಯಕ್ಕೆ ಒಳಗಾದವರ ಪರ ನ್ಯಾಯಕ್ಕಾಗಿ ಹೋರಾಟ ಮಾಡಿದರೆ ಅದು ಬಿಜೆಪಿಗರ ದೃಷ್ಠಿಯಲ್ಲಿ ಅಪರಾಧವಾಗುತ್ತದೆ. ಹೇಸಿಗೆ ತಿಂದಿರುವ ಬಿಜೆಪಿಗರು ಸಂತ್ರಸ್ಥ ಯುವತಿಯ ಪೋಷಕರ ಮೂಲಕ ಇತರರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾ ಅತ್ಯಾಚಾರಿಗಳ ರಕ್ಷಣೆಗೆ ಮುಂದಾಗಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು. ರಾಮ ಹೆಸರೇಳಿ ಅಧಿಕಾರಕ್ಕೆ ಬಂದವರ ಸಚಿವ ಸಂಪುಟದಲ್ಲಿ ರಾವಣಸುರರೇ ತುಂಬಿದ್ದಾರೆ. ಪಕ್ಷಾಂತರ ಮಾಡುವವರ ಬಗ್ಗೆ ಗಮನ ಹರಿಸುವ ಪ್ರದಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅವರದೇ ಪಕ್ಷದ ಆಡಳಿತದಲ್ಲಿ ಅಮಾಯಕ ಹೆಣ್ಣುಮಗಳ ಮೇಲೆ ಅಧಿಕಾರದಲ್ಲಿರುವವರೆ ನಡೆಸಿದ ಅತ್ಯಾಚಾರದ ಬಗ್ಗೆ ಇನ್ನೂ ಗಮನ ಹರಿಸಲಾಗಿಲ್ಲ. ರಾಜ್ಯ ಸರ್ಕಾರಕ್ಕೆ ನೈತಿಕತೆಯಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆಯಿದ್ದರೆ ತಕ್ಷಣವೇ ಜಾರಕಿಹೊಳಿಯನ್ನು ಬಂಧಿಸಿ ಕಾನೂನಿನ ತೆಕ್ಕೆಗೆ ನೀಡಬೇಕು. ನ್ಯಾಯಾಲಯದಿಂದ ತಡಯಾಜ್ಞೆ ತಂದಿರುವ ಕಳಂಕಿತ ಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಿ.ನಾಗೇಂದ್ರ ಕುಮಾರ್, ಕಿಕ್ಕೇರಿ ಸುರೇಶ್, ಮುಖಂಡರಾದ ಹರಳಹಳ್ಳಿ ವಿಶ್ವನಾಥ್, ಮಾಧವ ಪ್ರಸಾದ್, ಚೇತನ ಮಹೇಶ್, ಎಂ.ಡಿ.ಕೃಷ್ಣಮೂರ್ತಿ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದು ಮಾತನಾಡಿದರು.