ರಬ್ಬರ್ ಡಿಂಗಿಯಲ್ಲಿ 60 ವಲಸಿಗರ ಸಾವು

ಲಂಡನ್, ಮಾ.೧೫- ವಲಸಿಗರ ಬೋಟ್ ಮುಳುಗಡೆ ರೀತಿಯ ಪ್ರಕರಣ ಮತ್ತೆ ಮುಂದುವರೆದಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಇಂಜಿನ್ ಕೆಟ್ಟು ಹೋದ ಪರಿಣಾಮ ರಬ್ಬರ್ ಡಿಂಗಿಯಲ್ಲಿ ಸಂಚರಿಸುತ್ತಿದ್ದ ೬೦ ಮಂದಿ ವಲಸಿಗರು ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ೨೫ಕ್ಕೂ ಹೆಚ್ಚು ಮಂದಿಯನ್ನು ಮೆಡಿಟರೇನಿಯನ್ ಸಮುದ್ರದಲ್ಲಿ ಕಾರ್ಯಾಚರಿಸುತ್ತಿರುವ ಮಾನವೀಯ ಗುಂಪಿಗೆ ಸೇರಿದ ಓಷನ್ ವೈಕಿಂಗ್ ಬೋಟ್ ರಕ್ಷಿಸಿದೆ.
ಲಿಬಿಯಾ ಕರಾವಳಿಯ ಜಾವಿಯಾದಿಂದ ಈ ರಬ್ಬರ್ ಡಿಂಗಿ ಹೊರಟಿರುವ ಸಂಗತಿಯನ್ನು ಬದುಕುಳಿದಿರುವ ವಲಸಿಗರು ತಿಳಿಸಿದ್ದಾರೆ. ಯಾತ್ರೆ ಆರಂಭಿಸಿದ ಮೂರು ದಿನದಲ್ಲೇ ಎಂಜಿನ್ ಕೆಟ್ಟು ಹೋಗಿದ್ದು, ಪರಿಣಾಮ ಆಹಾರ-ನೀರಿಲ್ಲದೆ ಸಮುದ್ರದಲ್ಲೇ ರಬ್ಬರ್ ಡಿಂಗಿ ಅಲೆದಾಟ ನಡೆಸಿದೆ. ಮೂಲಗಳ ಪ್ರಕಾರ ರಬ್ಬರ್ ಡಿಂಗಿ ಮುಳುಗಡೆಯಿಂದಲ್ಲ, ಬದಲಾಗಿ ಹಸಿವು-ಬಾಯಾರಿಕೆಯಿಂದಲೇ ವಲಸಿಗರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಂತ್ರಸ್ತರಲ್ಲಿ ಮಹಿಳೆಯರು ಮತ್ತು ಕನಿಷ್ಠ ಒಂದು ಮಗು ಸೇರಿದೆ ಎಂದು ಬದುಕುಳಿದವರು ಹೇಳಿದ್ದಾರೆ. ಓಷನ್ ವೈಕಿಂಗ್ ತಂಡವು ಕಳೆದ ಶುಕ್ರವಾರ ಹೊರಟಿದ್ದ ಡಿಂಗಿಯನ್ನು ಬುಧವಾರ ದುರ್ಬೀನುಗಳೊಂದಿಗೆ ಗುರುತಿಸಿದೆ ಮತ್ತು ಇಟಾಲಿಯನ್ ಕರಾವಳಿ ಕಾವಲುಗಾರರ ಸಹಕಾರದಲ್ಲಿ ವೈದ್ಯಕೀಯ ಸ್ಥಳಾಂತರಿಸುವಿಕೆಯನ್ನು ನಡೆಸಿದೆ. ಬದುಕುಳಿದವರು ಅತ್ಯಂತ ದುರ್ಬಲ ಆರೋಗ್ಯ ಸ್ಥಿತಿಯಲ್ಲಿದ್ದಾರೆ ಮತ್ತು ಎಲ್ಲರೂ ವೈದ್ಯಕೀಯ ಆರೈಕೆಯಲ್ಲಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮತ್ತು ಗಂಭೀರ ಸ್ಥಿತಿಯಲ್ಲಿದ್ದ ಅವರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೆಲಿ
ಕಾಪ್ಟರ್ ಮೂಲಕ ಸಿಸಿಲಿಗೆ ರವಾನಿಸಲಾಗಿದೆ ಎಂದು ಎಂದು ಎಸ್‌ಒಎಸ್ ಮೆಡಿಟರೇನಿ ತಿಳಿಸಿದೆ.
ಇನ್ನು ಉಳಿದ ೨೫ ಜನರು ಇನ್ನೂ ಓಷನ್ ವೈಕಿಂಗ್‌ನಲ್ಲಿದ್ದಾರೆ, ಜೊತೆಗೆ ಹೆಚ್ಚು ವಲಸಿಗರನ್ನು ಇತರ ಎರಡು ದೋಣಿಗಳಿಂದ ರಕ್ಷಿಸಲಾಗಿದೆ. ಹಡಗು ಸುಮಾರು ನಾಲ್ಕು ದಿನಗಳ ದೂರದಲ್ಲಿರುವ ಅಂಕೋನಾ ಬಂದರಿಗೆ ಹೋಗುತ್ತಿದೆ.