‘ರಫ್ತು ರಂಗದಲ್ಲಿ ದ.ಕ ಜಿಲ್ಲೆಗೆ ವಿಫುಲ ಅವಕಾಶ’

ಮಂಗಳೂರು, ಸೆ.೨೪- ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಲಭ್ಯವಾದ ಸಂಪನ್ಮೂಲಗಳು ಸಾಕಷ್ಟಿವೆ, ಅದರೊಂದಿಗೆ ಸಮುದ್ರದ ಉತ್ಪನ್ನಗಳು ಇದ್ದು, ಸಂಪ್ರದಾಯಿಕ ರೀತಿಯಿಂದ ಹೊರಬಂದು ಕಾಲಕ್ಕೆ ತಕ್ಕಂತಹ ಸೃಜನಾತ್ಮಕತೆ ಬಳಸಿಕೊಂಡು ರಫ್ತು ಮಾಡುವ ಅಗತ್ಯತೆ ಇದೆ, ಅದಕ್ಕೆ ಪೂರಕವಾಗಿ ಇತರೆಡೆಗೆ ಹೋಲಿಕೆ ಮಾಡಿದ್ದಲ್ಲೀ, ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲೆಯ ಜನರ ಒಲವು ಕೂಡ ಹೆಚ್ಚಿದೆ, ಅದಕ್ಕೆ ಅನುಕೂಲಕರವಾಗಿ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಿದ್ದು ನುರಿತ, ತಾಂತ್ರಿಕ ನೈಪುಣ್ಯವುಳ್ಳವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ತಿಳಿಸಿದ್ದಾರೆ.
ಅವರು ಗುರುವಾರ ನಗರದ ಒಷನ್ ಪರ್ಲ್ ಹೋಟೆಲ್‌ನಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಸಂಸ್ಥೆ ವತಿಯಿಂದ ೭೫ನೇ ಆಜ಼ಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಾಣಿಜ್ಯ ಸಪ್ತಾಹ ರಫ್ತುದಾರರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಫ್ತು ರಂಗದಲ್ಲಿ ಜಿಲ್ಲೆಗೆ ವಿಫುಲ ಅವಕಾಶಗಳಿದ್ದು, ಅವುಗಳನ್ನು ಕೈಗಾರಿಕೋದ್ಯಮಿಗಳು ಸೃಜನಾತ್ಮಕವಾಗಿ ಬಳಸಿಕೊಳ್ಳಬೇಕು. ಜಾಗತಿಕ ಮಾರುಕಟ್ಟೆಗೆ ಜಿಲ್ಲೆಯಿಂದ ಕೈಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲು ಸಾಕಷ್ಟು ಉತ್ಪನ್ನಗಳಿವೆ. ಅದಕ್ಕೆ ಪೂಕವಾಗಿ ನೆಲ, ಜಲ ಹಾಗೂ ವಾಯು ಮಾರ್ಗಗಳಿದ್ದು, ಮುಂದಿನ ಒಂದೂವರೆ ವರ್ಷದೊಳಗೆ ೧,೨೦೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬೆಂಗಳೂರು-ಮಂಗಳೂರಿಗೆ ರಸ್ತೆ ಸಂಪರ್ಕದ ಕಾಮಗಾರಿ ಪೂರ್ಣಗೊಳ್ಳಲಿದೆ, ಆ ನಂತರದಲ್ಲಿ ಕೈಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲು ಮತ್ತಷ್ಟು ಅನುಕೂಲಕರವಾಗಲಿದೆ ಎಂದು ಹೇಳಿದರು. ವಿಟಿಪಿಸಿ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಕೈಗಾರಿಕೋದ್ಯಮಿಗಳಿಗೆ ಸಂಬಂಧಿಸಿದಂತೆ ಭೂಮಿ, ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಡುವ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ನಿಯಮಿತವಾಗಿ ಸಭೆಗಳನ್ನು ನಡೆಸಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಪೂರಕ ಬೆಳವಣಿಗೆಗೆ ಸಾಧ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧ ಎಂದು ತಿಳಿಸಿದ ಜಿಲ್ಲಾಧಿಕಾರಿಯವರು, ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಲ್ಲಿಸುವಂತೆ ತಿಳಿಸಿದರು.