ರಫ್ತು ಉದ್ದಿಮೆದಾರರ ಕುಂದುಕೊರತೆ ನಿವಾರಿಸಲು ನಿಯಮಿತ ಸಭೆ : ಡಿಸಿ


ದಾವಣಗೆರೆ ನ.೨೦; ಜಿಲ್ಲೆಯ ರಫ್ತು ಉದ್ದಿಮೆದಾರರ ಕುಂದು ಕೊರತೆಗಳನ್ನು ನಿವಾರಿಸಿ, ರಫ್ತಿಗೆ ಉತ್ತೇಜನ ನೀಡಲು ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿಯನ್ನು ರಚಿಸಲಾಗಿದ್ದು, ಇನ್ನು ಮುಂದೆ ನಿಯಮಿತವಾಗಿ ಸಭೆ ಕರೆದು ರಫ್ತುದಾರರ ಅಹವಾಲುಗಳನ್ನು ಆಲಿಸಿ, ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಿತಿಗೆ ಅವಶ್ಯವಾದ ಸದಸ್ಯರನ್ನು ನೇಮಿಸಿ ಮಾತನಾಡಿ, ಜಿಲ್ಲೆಯನ್ನು ರಫ್ತು ಹಬ್ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದರು. ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ ಆದ ಜಿ.ವಿ.ಪಾಟಿಲ್ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ರಫ್ತು ಉತ್ತೇಜನಾ ಸಮಿತಿಯನ್ನು ರಚಿಸಲಾಗಿದ್ದು, ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮ ಅನುಷ್ಟಾನಗೊಳಿಸಲು ಜಿಲ್ಲೆಯಲ್ಲಿ ಆರ್ಗ್ಯಾನಿಕ್ ಮಿಲೆಟ್ಸ್(ನವಣೆ, ಸಜ್ಜೆ, ಸಾವೆ, ರಾಗಿ) ಹಾಗೂ ಮೆಕ್ಕೆಜೋಳ ಮತ್ತು ಉಪಉತ್ಪನ್ನಗಳನ್ನು ಗುರುತಿಸಲಾಗಿದೆ. ಹಾಗೂ ಜಿಲ್ಲೆಯಲ್ಲಿ ಇರುವ ಅರೆಕಾನಟ್ ವ್ಯಾಲ್ಯು ಆಡೆಡ್ ಪ್ರೋಡಕ್ಟ್ಸ್, ಷುಗರ್‍ಸ್, ಮಾರಿಗೋಲ್ಡ್ ಫ್ಲವರ್ ಎಕ್ಸ್‌ಟ್ರಾಕ್ಟ್, ಗರ್ಕಿನ್ಸ್, ಫೌಂಡ್ರಿ ಇತರೆ ರಫ್ತು ವಸ್ತುಗಳಿಗೂ ಸಹ ಉತ್ತೇಜನ ನೀಡಲಾಗಿದೆ.
ಎಕ್ಸ್‌ಪೋರ್ಟ್ ಹಬ್‌ಗೆ ಕ್ರಿಯಾ ಯೋಜನೆ : ’ಡಿಸ್ಟ್ರಿಕ್ಟ್ ಆಸ್ ಎ ಎಕ್ಸ್‌ಪೋರ್ಟ್ ಹಬ್’ ಎಂಬ ಕಾರ್ಯಕ್ರಮ ಅನುಷ್ಟಾನಗೊಳಿಸಲು ಜಿಲ್ಲೆಯಲ್ಲಿ ಮೆಕ್ಕೆಜೋಳ, ಆರ್ಗ್ಯಾನಿಕ್ ಮಿಲೆಟ್ ಸೇರಿದಂತೆ ಏಳು ಉತ್ಪನ್ನಗಳನ್ನು ಗುರುತಿಸಿದ್ದು, ಇವುಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಹಾಗೂ ಉತ್ಪನ್ನಗಳ ಸಪ್ಲೈ ಚೈನ್ ಬಗ್ಗೆ ಮಾಹಿತಿ ಸಂಗ್ರಿಹಿಸಿ ಜಿಲ್ಲಾ ಕ್ರಿಯಾ ಯೋಜನೆ ತಯಾರಿಸಬೇಕು. ಜಿಲ್ಲೆಯಲ್ಲಿ ಎಷ್ಟು ರಫ್ತುದಾರರು ತಮ್ಮ ಉತ್ಪನ್ನಗಳನ್ನು ಯಾವ ದೇಶಗಳಿಗೆ ಎಷ್ಟು ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ ಎಂಬ ಮಾಹಿತಿ ಸೇರಿಸಿ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಡಿಸೆಂಬರ್ ಒಳಗೆ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಅಲ್ಲದೇ ಜಿಲ್ಲೆಯ ಉತ್ಪನ್ನಗಳಿಗೆ ಅವಶ್ಯಕವಾದ ಪರೀಕ್ಷಾ ಕೇಂದ್ರಗಳು, ಲಾಜಿಸ್ಟಿಕ್ಸ್ ಇತರೆ ವ್ಯವಸ್ಥೆ ಬಗ್ಗೆ ಸಹ ಉದ್ದಿಮೆದಾರರಿಂದ ಪ್ರಸ್ತಾವನೆ ಪಡೆದು ಸಲ್ಲಿಸುವಂತೆ ತಿಳಿಸಿದರು.ಗ್ರೀನ್ ಅಗ್ರೋ ಪ್ಯಾಕ್ ಪ್ರೈ.ಲಿ ನ ಮಾಲೀಕರಾದ ಕರಿಬಸಪ್ಪ ಮಾತನಾಡಿ, ಯೂರೋಪ್ ಮತ್ತು ಇತರೆ ದೇಶಗಳಿಗೆ ಮಿಡಿಸೌತೆ ಮತ್ತು ಇತರೆ ತರಕಾರಿಗಳನ್ನು ರಫ್ತು ಮಾಡಲಾಗುತ್ತಿದ್ದು, ೧೫ ಬ್ರಾಂಚ್ ಹೊಂದಲಾಗಿದೆ. ರೈತರಿಗೆ ಅನುಕೂಲ ಮಾಡುವುದು ಅಗತ್ಯವಾಗಿದ್ದು ಸ್ಟೋರೇಜ್‌ಗಾಗಿ ಕೊಗ್ಗನೂರಿನಲ್ಲಿ ಒಂದು ಸ್ಟೋರೇಜ್ ಯುನಿಟ್ ಸ್ಥಾಪಿಸಲಾಗಿದೆ ಎಂದರು. ಕೋವಿಡ್ ಹಿನ್ನೆಲೆಯ ಕಾರಣ ಹೇಳಿ ಶಿಪ್ಪಿಂಗ್ ದರವನ್ನು ದುಪ್ಪಟ್ಟು ಹೆಚ್ಚಿಸಲಾಗಿದೆ. ಇದರಿಂದ ರಫ್ತುದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ದರ ಇಳಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಹಕರಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ, ಉಪ ನಿರ್ದೇಶಕ ಮಂಜುನಾಥ್, ಗ್ರಾಮಾಂತರ ಕೈಗಾರಿಕಾ ವಿಭಾಗದ ಪ್ರಭಾರ ಉಪನಿರ್ದೇಶಕ ಮನ್ಸೂರ್, ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ್. ಕೈಗಾರಿಕಾ ವಿಸ್ತರಣಾಧಿಕಾರಿ ಶ್ರೀಕಾಂತ ಎಸ್.ಎಸ್, ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಎನ್.ಸಿ.ಹನುಮಂತರಾವ್, ಝಡ್.ಕೆ.ಗಾರ್ಮೆಂಟ್ಸ್‌ನ ಡಿ.ಶೇಷಾಚಲ, ರಫ್ತು ಉದ್ದಿಮೆದಾರರಾದ ಸಂದೀಪ್, ಮಹಾದೇವಯ್ಯ, ನಾಗರಾಜಪ್ಪ, ಪ್ರದೀಪ್ ಇತರರು ಇದ್ದರು.