ರಣ ಭೀಕರ ಮಳೆಗೆ ಮಂಡ್ಯ ಜಿಲ್ಲೆ ತತ್ತರ

ಇಂದೂ ಸಹ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಬಂದ್
ಮಂಡ್ಯ: ಆ.04:- ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಕಳೆದ ಮೂರು ದಿನಗಳಿಂದ ವರುಣಾರ್ಭಟ ನಿರಂತರವಾಗಿ ಸಾಗಿದೆ. ಪರಿಣಾಮ ಮಂಡ್ಯದ ತಗ್ಗು ಪ್ರದೇಶಗಳಾದ ಚಿಕ್ಕಮಂಡ್ಯ ಕೆರೆಯಂಗಳದ ಬೀಡಿ ಕಾರ್ಮಿಕರ ಕಾಲೋನಿ, ಹಾಲಹಳ್ಳಿ ಕೆರೆ ಬಡಾವಣೆ ಸೇರಿದಂತೆ ಹಲವೆಡೆ ಮನೆ ಮತ್ತು ರಸ್ತೆಗಳಲ್ಲಿ ನೀರು ಹರಿಯುತ್ತಿದೆ.
ರಣ ಭೀಕರ ಮಳೆಗೆ ಮಂಡ್ಯ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನೆರೆ ಹಾವಳಿ ಉಂಟಾಗಿದ್ದು, ಕಳೆದ ಮೂರು ದಿನಗಳಿಂದ ತಾಲೂಕಿನ ಬೂದನೂರು ಬಳಿಯ ಕೆರೆ ಒಡೆದು ಅಪಾರ ಪ್ರಮಾಣದ ನೀರು ಬೆಂಗಳೂರು-ಮೈಸೂರು ಹೆದ್ದಾರಿ ಮೇಲೆ ಹರಿಯುತ್ತಿರುವ ಪರಿಣಾಮ ಹೆದ್ದಾರಿ ಸಂಚಾರವನ್ನು ಇಂದೂ ಸಹ ಬಂದ್ ಮಾಡಲಾಗಿದೆ.
ತಾಲೂಕಿನ ಕೆರಗೋಡು, ಹುಂಜನಕೆರೆಗಳು ಒಡೆದ ಪರಿಣಾಮ ಏಕಾಏಕಿ ಮದ್ದೂರು ಕೆರೆಗೆ ನೀರು ನುಗ್ಗಿದ್ದು, ಮದ್ದೂರು ಕೆರೆ ಕೋಡಿ ಒಡೆದು ಅವಾಂತರ ಸೃಷ್ಠಿಸಿತ್ತು. ಕೆರೆ ನೀರು ಕೊಲ್ಲಿ ನದಿಗೆ ಸೇರ್ಪಡೆಗೊಂಡು ಅಧಿಕ ಪ್ರಮಾಣದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹರಿದ ಪರಿಣಾಮ ಮದ್ದೂರು-ಚನ್ನಪಟ್ಟಣ ಸಂಚಾರವೂ ಬಂದ್ ಆಗಿತ್ತು. ಇಂದೂ ಸಹ ಸಂಚಾರ ಬಂದ್ ಮಾಡಲಾಗಿದ್ದು, ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಶ್ರೀರಂಗಪಟ್ಟಣದ ಲೋಕಪಾವನಿ ನದಿಯಲ್ಲೂ ಸಹ ಪ್ರವಾಹ ಬಂದಿದ್ದು, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಪಟ್ಟಣದ ಸಂತೇಮಾಳ ಮೈದಾನಕ್ಕೂ ನೀರು ನುಗ್ಗಿದೆ. ಸಂತೆ ಪ್ರದೇಶದ ಪಕ್ಕದಲ್ಲಿರುವ ಮನೆಗಳಿಗೆ ಕಾವೇರಿ ನದಿ ನೀರು ನುಗಿದ್ದು, ಇದರಿಂದ ನಿವಾಸಿಗಳ ಬದುಕು ಅತಂತ್ರವಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ನೀರು ನುಗ್ಗಿ ಅತಂತ್ರ ಪರಿಸ್ಥಿತಿಯಲ್ಲಿರುವ ಜನರನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮನೆಗಳ ಗೋಡೆ ಕುಸಿದು ತೊಂದರೆಯಾಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಕೋಳಿ Áರಂ ಸೇರದಂತೆ ಇತರೆಡೆಗಳಲ್ಲೂ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ.
ಮಂಡ್ಯ ತಾಲೂಕು ಕೆರಗೋಡು ಸಮೀಪದ ಹುಂಜನಕೆರೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿತ್ತು. ಸಮೀಪದಲ್ಲಿದ್ದ ಮಾಧವ ಶಾಲಾ ಕೊಠಡಿಗೂ ನೀರು ನುಗ್ಗಿ ಅವಾಂತರ ಸೃಷ್ಠಿಸಿತ್ತು. ಕೆರಗೋಡು ಗ್ರಾಮದಲ್ಲಿರುವ ಮತ್ತೊಂದು ತಾವರೆಕೆರೆ ಸಹ ಒಡೆಯುವ ಹಂಚಿನಲ್ಲಿದ್ದು, ಆತಂಕ ಮನೆಮಾಡಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಜೆಸಿಬಿ ಸಹಾಯದಿಂದ ಕೆರೆ ಕೋಡಿಯನ್ನು ಅಗಲಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಇಲ್ಲದಿದ್ದರೆ ಮತ್ತೊಂದು ಅನಾಹುತ ಸಂಭವಿಸುತ್ತಿತ್ತು.
ಇಷ್ಟೆಲ್ಲಾ ಅವಾಂತರಗಳನ್ನು ಸೃಷ್ಠಿಸಿರುವ ಮಳೆ ಇನ್ನೂ ಸಹ ಮುಂದುವರಿದಿದ್ದು, ಇನ್ನೇನು ಆತಂಕಗಳನ್ನು ಎದುರಿಸಬೇಕೋ ತಿಳಿಯದಾಗಿದೆ ಎಂದು ಸಾರ್ವಜನಿಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.