ರಣ ಬಿಸಿಲು,ಎಳನೀರು ವ್ಯಾಪಾರ ಬಲು ಜೋರು

ವಿಜಯಪುರ.ಮಾ೨೩: ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ನಿದಾನಕ್ಕೆ ಶುರುವಾಗುತ್ತಿದ್ದಂತೆ ಜನಸಾಮಾನ್ಯರು ತತ್ತರಗೊಂಡು ತಂಪು ಪಾನೀಯಗಳಿಗೆ ಮೊರೆಹೋಗುತ್ತಿದ್ದು ಇದರಿಂದಾಗಿಯೇ ತಂಪು ಪಾನೀಯಗಳ ದರ ಸಮರಕ್ಕೆ ಈಗಾಗಲೇ ಜನರ ಕೈ ಸುಟ್ಟುಕೊಳ್ಳುವಂತಾಗಿದೆ.
ಜಿಲ್ಲೆಯಲ್ಲಿ ಈ ಬಾರಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಸೂರ್ಯ ಜನರ ನೆತ್ತಿ ಸುಡುವುದರ ಜೊತೆಗೆ ಮೈಬೆವರನ್ನು ಇಳಿಸುತ್ತಿದ್ದಾನೆ. ಇದರಿಂದ ಜನರು ಸುಸ್ತಾಗಿ ದಾಹ ನೀಗಿಸಿಕೊಳ್ಳಲು ತಂಪು ಪಾನೀಯ, ಕಬ್ಬಿನ ಹಾಲು, ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ರಸದ ಮೊರೆಹೋಗಿದ್ದಾರೆ.
ಮುಂಗಾರು ಹಿಂಗಾರು ಹಂಗಾಮ ಮುಗಿಯುತ್ತಿದ್ದಂತೆ ಬಯಲು ಸೀಮೆಯ ಜಿಲ್ಲೆಗಳಲ್ಲಿ ಸದ್ಯಕ್ಕೆ ದಗದಗನೆ ಬಿಸಿಲೇರಿ ಜನರ ನೆತ್ತಿ ಸುಡುತ್ತಿದ್ದು, ಮಕ್ಕಳು ಮಹಿಳೆಯರು, ವಯೋವೃದ್ದರು ಬಿಸಿಲಿನ ಪರಿಣಾಮ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಸತತ ಎರಡು ಮೂರು ವರ್ಷಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ಕೆರೆ, ಕುಂಟೆ ಗಳಲ್ಲಿ ನೀರು ತುಂಬಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇಲ್ಲದೆ ಇದ್ದರೂ ಬಿಸಿಲಿನ ಆರ್ಭಟ ಮಾತ್ರ ಜನರನ್ನು ಕಂಗೆಡಿಸಿದೆ.
ಬೇಸಿಗೆ ಪ್ರಾರಂಭದಲ್ಲಿಯೇ ಉರಿಬಿಸಿಲಿನ ಅನುಭವಕ್ಕೆ ಬೆಚ್ಚಿಬೀಳುತ್ತಿರುವ ನಾಗರಿಕರು ಮಾರ್ಚ್, ಏಪ್ರಿಲ್, ಮೇ ತಿಂಗಳು ಹೇಗಪ್ಪಾ ಕಳೆಯುವುದು ಎಂಬ ಚಿಂತೆಯಲ್ಲಿದ್ದು ಜಿಲ್ಲೆಯ ಜನತೆ ಛತ್ರಿ ಹಿಡಿದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಸಿಲಿನ ಜೊತೆಗೆ ಬಿಸಿ ಗಾಳಿಯೂ ಸಹ ಜನರನ್ನು ತತ್ತರಿಸುವಂತೆ ಮಾಡಿದೆ. ನಾಗರೀಕರು ಬಿಸಿಲಿನ ತಾಪಕ್ಕೆ ಧಣಿವಾರಿಸಲು ಎಳೆನೀರು ಕುಡಿದು ದೇಹವನ್ನು ತಂಪಾಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಬೇಸಿಗೆ ಬಂದರೆ ಸಾಕು ಜನರು ಎಳೆನೀರಿನ ಮೊರೆಹೋಗಿ ದೇಹ ತಂಪು ಮಾಡಿಕೊಳ್ಳುವುದು ಸಹಜ ಆದರೆ, ಎಳೆನೀರಿನ ಬೆಲೆ ೪೦-೫೦ ರವರೆಗೂ ಹೆಚ್ಚಾಗಿದ್ದರೂ, ಬಿಸಿಲಿನ ತಾಪವನ್ನು ತಗ್ಗಿಸಿಕೊಳ್ಳಲು ಜನತೆ ಆರೋಗ್ಯದಾಯಕ ಎಳೆನೀರಿನ ಮೊರೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ತಂಪು ಪಾನಿಯ ಹಾಗೂ ಕಬ್ಬಿನ ರಸಕ್ಕೆ ಮೊರೆ ಹೋಗುತ್ತಿದ್ದಾರೆ. ಈಬಾರಿ ರಣ ಬಿಸಿಲಿನಿಂದ ನೆತ್ತಿ ಸುಡುತ್ತಿದ್ದು, ಬಿಸಿಲಿನ ತಾಪ ಮತ್ತಷ್ಟು ತೀವ್ರಗೊಳ್ಳಲಿದೆ. ಬೆಳಿಗ್ಗೆ ೭.೩೦ರ ವೇಳೆಯಲ್ಲಿರುವ ಎಳೆ ಬಿಸಿಲು ಜನರ ಮೈಸುಡಲು ಪ್ರಾರಂಭಿಸುತ್ತದೆ. ಸಂಜೆ ೫ ಗಂಟೆಯವರೆಗೂ ಬಿಸಿಲಿನ ಜಳ ಇರುವುದರಿಂದ ಮೈ, ಚರ್ಮದ ಜೊತೆ ಬಾಯಿ ಹೊಣಗುವ ಅನುಭವವಾಗುತ್ತದೆ. ಬಿಸಿಲಿನ ತಾಪದ ತೀವ್ರತೆಗೆ ಜನರು ತಂಪು ಪಾನಿಯ, ಪಾನಕ, ಮಜ್ಜಿಗೆ ಎಳೆನೀರು ಕಡೆ ವಾಲುತ್ತಿದ್ದಾರೆ.
ಮಜ್ಜಿಗೆಗೆ ಸಾಕಷ್ಟು ಬೇಡಿಕೆ : ಬೇಕರಿ, ಹೋಟೇಲ್‌ಗಳಲ್ಲಿ ತಂಪು ಪಾನಿಯಗಳ ಮಾರಾಟ ಗಣನೀಯವಾಗಿ ಕಾಣುತ್ತದೆ. ಮಜ್ಜಿಗೆಗೆ ಸಾಕಷ್ಟು ಬೇಡಿಕೆ ಕಂಡುಬರುತ್ತಿದೆ. ಬಿಸಿಲಿನ ತಾಪ ಹೆಚ್ಚಾದಂತೆ ರೋಗ-ರುಜಿನುಗಳು ಮನೆ ಮಾಡುತ್ತವೆ. ರಸ್ತೆ ಬದಿಯಲ್ಲಿ ಮಜ್ಜಿಗೆ ಹಾಗೂ ಹೆಸರುಬೇಳೆ, ಕೋಸಂಬರಿ ಮಾರಾಟದ ಅಂಗಡಿಗಳು ತಲೆಎತ್ತುತ್ತಿವೆ. ಕತ್ತರಿಸಿಟ್ಟ ಹಣ್ಣುಗಳು ಯತೇಚ್ಛವಾಗಿ ದೊರೆಯುತ್ತಿದೆ. ಮಾರ್ಚ್ ತ್ತು ಏಪ್ರಿಲ್ ನಲ್ಲಿ ಬಿಸಿಲಿನ ತಾಪಮಾನ ೩೪ ರಿಂದ ೩೫ಡಿಗ್ರಿ ಸೆಂಟಿಗ್ರೇಟ್ ವರೆಗೆ ಏರಿದೆ. ಬಿಸಿಲ ಝಳಕ್ಕೆ ಮಧ್ಯಾಹ್ನದ ವೇಳೆ ರಸ್ತೆಗೆ ಇಳಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಎಳೆನೀರನ್ನು ಮಾರುವವರು ವಿವಿಧ ತೋಟಗಳಿಗೆ ತೆರಳಿ ಬೆಳಗಿನ ಜಾವ ಮಾರಾಟ ಮಾಡಲು ಪ್ರಾರಂಭಿಸುತ್ತಾರೆ. ಮಾರುಕಟ್ಟೆಯಲ್ಲಿ ಒಂದು ಎಳೆನೀರಿನ ಬೆಲೆ ೩೦ರೂ.ಗಳವರೆಗೆ ಮಾರಾಟವಾಗುತ್ತಿದೆ. ಎಳನೀರು ಮಾನವನ ದೇಹಕ್ಕೆ ಬಹು ಮುಖ್ಯವಾದ ಲವಣಾಂಶ ಒಳಗೊಂಡಂತಹ ಪೇಯವಾಗಿದೆ. ಇದರಲ್ಲಿ ಹೆಚ್ಚು ಪೋಟಾಷಿಯಂ ಇರುವ ಕಾರಣ ಹೈಪರ್‌ಟೆಂಕ್ಷನ್ ಕಡಿಮೆ ಮಾಡಲು ಸಹಕಾರಿಯಾಗಿದೆ. ಉತ್ತಮ ಕೊಲೆಸ್ಟ್ರಾಲ್ ವೃದ್ಧಿ ಮಾಡುವ ಅಂಶವಾಗಿದೆ. ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ಅಂಗಾಂಗಗಳಲ್ಲಿ ಟಾಕ್ಸಿನ್ ದೂರವಾಗಿ ಎಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.
ನಿಯಮಿತವಾಗಿ ಎಳೆನೀರು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಬಗೆಹರಿಸಿಕೊಳ್ಳಬಹುದು.ಮಜ್ಜಿಗೆ ಮತ್ತು ನಿಂಬೆಹಣ್ಣಿನ ರಸ ಒಂದು ಲೋಟಕ್ಕೆ ೧೦ರೂ ಹಾಗೂ ಕಬ್ಬಿನ ಹಾಲಿಗೆ ೨೦ರೂ., ಮೋಸಂಬಿ ಮತ್ತು ಪೈನ್ ಆಪಲ್ ಜ್ಯೂಸ್ ಗಳಿಗೆ ೪೦ರೂ., ಆಫಲ್ ಜ್ಯೂಸಿಗೆ ೫೦ರೂ., ಸಫೋಟ ಜ್ಯೂಸಿಗೆ ೪೫ರೂ., ಡ್ರೈಪ್ರೂಟ್ಸ್ ಜ್ಯೂಸಿಗೆ ೬೫ರೂಗೆ ಮಾರಾಟ ಮಾಡಲಾಗುತ್ತಿದೆ.
ಪಟ್ಟಣದ ಎಳೆನೀರು ವ್ಯಾಪಾರಿ ರಾಮಪ್ಪ ಮಾತಣಾಡಿ ಬೇಸಿಗೆ ಸಂದರ್ಭದಲ್ಲಿ ಎಳೆನೀರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಎಳೆನೀರು ವ್ಯಾಪಾರ ಮಾಡಲಾಗುತ್ತಿದೆ. ಆಸ್ಪತ್ರೆಯಿಂದ ಬರುವ ರೋಗಿಗಳಿಗೆ, ಗರ್ಭಿಣಿಗಳಿಗೆ, ವಯೋವೃದ್ಧರಿಗೆ , ೩೫ರೂಪಾಯಿ ಬೆಲೆಯಲ್ಲಿ ಎಳೆನೀರನ್ನು ನೀಡುತ್ತಿದ್ದೇವೆ. ತಾಲೂಕಿನ ಮತ್ತು ಜಿಲ್ಲೆಯ ಅಕ್ಕಪಕ್ಕದ ತೋಟಗಳಿಂದ ಎಳೆನೀರನ್ನು ಖರೀದಿಸಿ ತರಲಾಗುತ್ತಿದೆ. ಜನರ ಬಾಯಾರಿಕೆ ತೀರಿಸಬೇಕಾದರೆ ಅದು ಎಳೆನೀರಿನಿಂದ ಮಾತ್ರ ಸಾದ್ಯ ಎಂದರು..
ಯೋಗಗುರು ರವೀಂದ್ರ ಮಾತಣಾಡಿ ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಮಧ್ಯಾಹ್ನದ ವೇಳೆಯಂತೂ ಮರದ ನೆರಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರೀ ತಲೆಯಲ್ಲಿ ಹೊರಗಡೆ ಹೋದರೆ, ಬಿಸಿಲಿನ ತಾಪಕ್ಕೆ ತಲೆನೋವಿನ ಬಾಧೆ ಹೆಚ್ಚಾಗುತ್ತದೆ. ಎಳೆನೀರು ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದರು..
ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಗುಣವಂತ ಮಾತಣಾಡಿ ನರೆಗಾ ಯೋಜನೆಯಲ್ಲಿ ಉದ್ಯೋಗ ಚೀಟಿ ಹೊಂದಿದವರಿಗೆ ತೆಂಗಿನ ತೋಟ ಮಾಡುವವರಿಗೆ ಪ್ರೋತ್ಸಾಹವನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗುತ್ತಿದೆ. ಪ್ರತಿ ಬೇಸಿಗೆ ವೇಳೆಯಲ್ಲಿ ಎಳೆನೀರಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಎಳೆನೀರು ತೋಟ ಮಾಡುವ ರೈತರು ನರೆಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತೆಂಗಿನ ಪುನಶ್ಚೇತನಕ್ಕೆ ಒಂದು ಎಕರೆಗೆ ೨೦೩೮೮/-ರೂ. ಹಾಗೂ ಕೂಲಿಗೆ ೧೭೬೨೬/-, ಸಾಮಗ್ರಿ ೨೭೬೨/-ರೂ. ನೀಡಲಾಗುತ್ತಿದೆ ಎಂದರು.