
ಬೆಂಗಳೂರು, ಮೇ.೨೨-ರಾಜ್ಯ ರಾಜಧಾನಿ ಬೆಂಗಳೂರು ಮಳೆಗಾಲಕ್ಕೆ ಮುನ್ನ ನಿನ್ನೆ ಸುರಿದ ಮಹಾಮಳೆಗೆ ಅಕ್ಷರಶಃ ತತ್ತರಿಸಿದೆ. ಮಳೆ ಬೆಂಗಳೂರಿಗರನ್ನು ಹಿಂಡಿ ಹಿಪ್ಪೆ ಮಾಡಿದಲ್ಲದೆ, ಕ್ಷಣಮಾತ್ರದಲ್ಲಿಯೇ ಇಬ್ಬರನ್ನು ಈ ಮಳೆ ಬಲಿ ತೆಗೆದುಕೊಂಡಿದೆ. ಮತ್ತೊಂದೆಡೆ ಹಳೆ ಕಟ್ಟಡಗಳು ನೆಲಕ್ಕೆ ಉರುಳುವ ವಾತಾವರಣ ನಿರ್ಮಾಣವಾಗಿದ್ದು, ಎಲ್ಲೆಡೆ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಹಾಗೇ, ಬಹುತೇಕ ಕಡೆಗಳಲ್ಲಿ ಕೇವಲ ೧ ಗಂಟೆಯಲ್ಲೇ ಬರೋಬ್ಬರಿ ೧೦೦ ಮಿಮೀ.ಗಿಂತ ಹೆಚ್ಚಿನ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಪರಿಣಾಮ ಅನೇಕ ಏರಿಯಾಗಳಲ್ಲಿ ರಾತ್ರಿಯಿಡೀ ಜನರು ಪರದಾಡಿದ್ದಾರೆ.
ನಿನ್ನೆ ಮಧ್ಯಾಹ್ನ ಸುಮಾರಿಗೆ ಇಲ್ಲಿನ ಕೆಆರ್ ಸರ್ಕಲ್ ಬಳಿಯ ಕೆಳಸೇತುವೆಯಲ್ಲಿ ನಿಂತಿದ್ದ ನೀರಿನಲ್ಲಿ ಕಾರು ಮುಳುಗಿ ಮಹಿಳಾ ಟೆಕ್ಕಿಯನ್ನು ಬಲಿ ಪಡೆದುಕೊಂಡ ದುರ್ಘಟನೆ ಮಾಸುವ ಮುನ್ನವೇ ಯುವಕನೋರ್ವ ರಾಜಕಾಲುವೆಯಲ್ಲಿ ಕೊಚ್ಚಿಹೋಗಿರುವ ಘಟನೆ ನಡೆದಿದೆ.
ಕೆಪಿ ಅಗ್ರಹಾರದ ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಲೋಕೇಶ್(೩೧) ಮೃತದೇಹ ಸೋಮವಾರ ಬ್ಯಾಟರಾಯನಪುರದ ರಾಜಕಾಲುವೆ ಬಳಿ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಳೆ ಹಿನ್ನೆಲೆ ನೀರಿನ ಆಳ ಎಷ್ಟಿದೆ ಅಂತ ನೋಡಲು ಲೋಕೇಶ್ ಹೋಗಿದ್ದರು. ಈ ವೇಳೆ ಅಲ್ಲಿ ಅಪಾಯವಿದೆ ಬೇಡ ಎಂದು ಹೇಳಿದರೂ ಯಾರ ಮಾತನ್ನು ಸಹ ಲೆಕ್ಕಿಸದೇ ಲೋಕೇಶ್ ನೀರಿಗೆ ಇಳಿದಿದ್ದರು. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು ಎನ್ನಲಾಗಿದೆ.
ನಿನ್ನೆ ಸಂಜೆ ರಾಜಕಾಲುವೆ ಅಕ್ಕಪಕ್ಕದ ಕಟ್ಟಡದವರು ಅಳಕ್ಕೆ ಹೋಗಬೇಡವೆಂದು ಸಲಹೆ ನೀಡಿದ್ದರೂ, ಅವರ ಮಾತು ಕೇಳದೆ ನೀರಿನ ಆಳ ನೋಡುತ್ತೇನೆ ಎಂದು ಲೋಕೇಶ್ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ. ಈ ಸಮಯದಲ್ಲಿ ಲೋಕೇಶ್ ಪಾನಮತ್ತನಾಗಿದ್ದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಲೋಕೇಶ್ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೆಕ್ಕಿ ಬಲಿ: ಇನ್ನೂ, ನಿನ್ನೆ ವರುಣ ಅಕ್ಷರಶಃ ಅಟ್ಟಹಾಸ ಮೆರೆದಿದ್ದು, ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿ ಅಂಡರ್ ಪಾಸ್‌ನಲ್ಲಿ ಕಾರು ಮುಳುಗಿ, ಅದರಲ್ಲಿದ್ದ ಆರು ಜನರ ಪೈಕಿ ಬಾನುರೇಖಾ ಎನ್ನುವ ಯುವತಿ ಬಲಿಯಾಗಿದ್ದಳು. ಕಾರಿನಲ್ಲಿದ್ದವರ ರಕ್ಷಣೆಯ ಒಂದೊಂದು ದೃಶ್ಯ ಆತಂಕ್ಕೆ ಎಡೆ ಮಾಡಿತ್ತು.
ಹಾಗೇ, ಕುಮಾರಕೃಪಾ ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಸಾವಿನ ದವಡೆಯಿಂದ ಬಚಾವ್ ಆಗಿದ್ದು, ಧಾರಾಕಾರ ಮಳೆಗೆ ಕುಮಾರಕೃಪಾ ರಸ್ತೆಯಲ್ಲಿ ಬೃಹತ್ ಮರವೊಂದು ಕಾರು, ಬೈಕ್ ಮೇಲೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರ ಪಾರಾಗಿದ್ದು, ಬೈಕ್ ಸವಾರನ ತಲೆಗೆ ಗಾಯವಾಗಿದೆ. ಕೂಡಲೇ ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಎಷ್ಟು ಮಳೆ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಅಲ್ಪಕಾಲ ಬಿರುಗಾಳಿ ಸಹಿತ ಸುರಿದ ರಣಮಳೆ ಭಾರೀ ಅನಾಹುತಗಳನ್ನೇ ಸೃಷ್ಟಿಸಿತು. ನಿನ್ನೆ ಮಧ್ಯಾಹ್ನ ೨.೩೦ ರಿಂದ ೫.೩೦ ರವರೆಗೆ ಬೆಂಗಳೂರಿನಲ್ಲಿ ೧೦೦ ಮಿಮೀ ಮಳೆ ದಾಖಲಾಗಿದೆ. ಈ ವೇಳೆ ಗುಡುಗು, ಮಿಂಚು, ಆಲಿಕಲ್ಲು ಮತ್ತು ಬಲವಾದ ಗಾಳಿ ಬೀಸಿತು.
ಮಳೆಯ ಪರಿಣಾಮ ಮಲ್ಲೇಶ್ವರಂ, ರಾಜಾಜಿನಗರ, ಶಿವಾಜಿನಗರ, ಮೇಕ್ರಿ ಸರ್ಕಲ್, ಹೆಬ್ಬಾಳ, ಯಶವಂತಪುರ, ಬಾಣಸವಾಡಿ, ಮಾಗಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಬೆಂಗಳೂರಿನ ಹಲವೆಡೆ ವಿಶೇಷವಾಗಿ ಉತ್ತರ ಮತ್ತು ಪಶ್ಚಿಮ ಬೆಂಗಳೂರಿನಲ್ಲಿ ಆಲಿಕಲ್ಲುಗಳ ಮಳೆಯಾಯಿತು.
ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಸಂಜೆ ೫.೩೦ ರವರೆಗೆ ೩೦ ಮಿಮೀ ಮಳೆ ದಾಖಲಾಗಿದ್ದರೆ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ೨೫.೧ ಮಿಮೀ ಮತ್ತು ಕೆಐಎ ೮.೬ ಮಿಮೀ ದಾಖಲಾಗಿದೆ. ರಾತ್ರಿ ೮.೩೦ರವರೆಗೆ ನಗರದಲ್ಲಿ ೩೧.೪ಮಿ.ಮೀ ಹಾಗೂ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ೨೬.೫ಮಿ.ಮೀ ಮಳೆ ದಾಖಲಾಗಿದೆ. ಮಧ್ಯಾಹ್ನ ೩.೩೦-೪ ಗಂಟೆಯ ವರೆಗೆ ತೀವ್ರ ಮಳೆಯಾಗಿದ್ದು, ನಗರದ ಬಹುತೇಕ ಭಾಗಗಳಲ್ಲಿ ೨೪ ಮಿಮೀ ಮಳೆ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಟ ಜಗ್ಗೇಶ್‌ಗೂ ತಟ್ಟಿದ ಮಳೆ ಬಿಸಿ..!
ನಟ, ರಾಜಕಾರಣಿ ಜಗ್ಗೇಶ್ ಅವರಿಗೂ ಮಳೆಯ ಬಿಸಿ ತಟ್ಟಿದೆ. ಜಗ್ಗೇಶ್ ಅವರ ಐಷರಾಮಿ ಕಾರು ಮಳೆಗೆ ಮುಳುಗಿ ಹೋಗಿದೆ. ಮನೆಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಜಗ್ಗೇಶ್ ಕಾರು ನೀರಿನಲ್ಲಿ ಮುಳುಗಿದೆ.
ಈ ಬಗ್ಗೆ ಸ್ವತಃ ನಟ ಜಗ್ಗೇಶ್ ಬಹಿರಂಗ ಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಶೇರ್ ಮಾಡಿದ್ದಾರೆ. ಕಾರು ಮುಳುಗಿದ ಸ್ಥಳದಲ್ಲಿಂದ ನೀರು ಹೊರತೆಗೆಯುವ ಕೆಲಸ ಆಗುತ್ತಿದ್ದು ಬಹುತೇಕ ನೀರು ಹೊರತೆಗೆಯಲಾಗಿದೆ. ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ರಸ್ತೆಯ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ನನ್ನ ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು. ಮೋಟಾರ್ ಬಳಸಿ ನೀರು ಹೊರಹಾಕಿಸಲಾಯಿತು. ಇಂಥ ಆಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದ್ದಿದ್ದು ಆಶ್ಚರ್ಯ ಎಂದು ಹೇಳಿದ್ದಾರೆ.
ಇಂದು ಮಳೆ..!
ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಕೂಡ ನಗರದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಮಹಾದೇವಪುರ, ಬೊಮ್ಮನಹಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸಾಧ್ಯತೆ.
ಗರಿಷ್ಟ ತಾಪಮಾನ ೩೪ ಡಿಗ್ರಿ, ಕನಿಷ್ಠ ೧೯ ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳವಾರ & ಬುಧವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದು ಗುರುವಾರದ ಬಳಿಕ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಿಮಾನಯಾನಕ್ಕೆ ತಟ್ಟಿದ ಬಿಸಿ, ಮಾರ್ಗ ಬದಲಾವಣೆ..!
ಭಾನುವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಾರಿ ಮಳೆ ಸುರಿದಿದ್ದು, ಐದು ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಮೂರು ಇಂಡಿಗೋ ವಿಮಾನಗಳು ಮತ್ತು ಒಂದು ಏರ್ ಇಂಡಿಯಾ ವಿಮಾನವನ್ನು ಚೆನ್ನೈಗೆ ತಿರುಗಿಸಲಾಯಿತು. ಇನ್ನೊಂದು ಒಂದು ಸ್ಟಾರ್ ಏರ್ ವಿಮಾನವನ್ನು ಹೈದರಾಬಾದ್‌ಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ನಿನ್ನೆ ಚೆನ್ನೈ ಮಧ್ಯಾಹ್ನ ೨.೧೨ಕ್ಕೆ ಟೇಕಾಫ್ ಆಗಿದ್ದ ವಿಮಾನವು ಬೆಂಗಳೂರಿನಲ್ಲಿನ ಕಳಪೆ ಹವಾಮಾನದಿಂದಾಗಿ ಮಧ್ಯದಲ್ಲಿಯೇ ಮತ್ತೆ ಚೆನ್ನೈಗೆ ಹಿಂತಿರುಗಿತು. ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನ ಮಧ್ಯಾಹ್ನ ೧೨.೫೯ಕ್ಕೆ ಮತ್ತು ಪುಣೆಯಿಂದ ೧.೫೭ಕ್ಕೆ ಹೊರಟಿದ್ದ ವಿಮಾನಗಳನ್ನು ಚೆನ್ನೈ ಮಾರ್ಗ ಬದಲಾವಣೆ ಮಾಡಲಾಯಿತು. ಕಲಬುರಗಿಯಿಂದ ಬೆಂಗಳೂರಿನ ಟರ್ಮಿನಲ್ ೨ ತಲುಪಬೇಕಿದ್ದ ಸ್ಟಾರ್ ಏರ್ ವಿಮಾನವನ್ನು ಹೈದರಾಬಾದ್‌ಗೆ ತಿರುಗಿಸಲಾಗಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ಏರ್‌ರ್ಪೋರ್ಟ್ ಲಿಮಿಟೆಡ್ ಮಾಹಿತಿ ನೀಡಿದೆ.
ಕಟ್ಟಡ ಬೀಳುವ ಆತಂಕ..!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಧಾರಕಾರ ಮಳೆಗೆ ಇಲ್ಲಿನ ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರ ಬಳಿಯ ಎಕೆ ಕಾಲೋನಿಯಲ್ಲಿ ಕಟ್ಟಡವೊಂದು ಉರುಳಿ ಬಿದ್ದಿದೆ. ಮನೆಯ ನಿವಾಸಿಗಳೆಲ್ಲಾ ಹೊರಕ್ಕೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಯವಿಲ್ಲ.
ಘಟನೆ ಸಂಬಂಧ ಕಟ್ಟಡ ನೆಲಕ್ಕೆ ಉರುಳಿಸಲು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ದೌಡುಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.