
ಔರಾದ :ಮಾ.10: ತಾಲೂಕಿನ ವಡಗಾಂವ (ದೇ) ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ರಣಗಂಬ ಉತ್ಸವ ಗುರುವಾರ ಸಡಗರ ಸಂಭ್ರಮದಿಂದ ಜರುಗಿತು.
ರಣಗಂಬ ಉತ್ಸವ ಪ್ರಯುಕ್ತ ಗ್ರಾಮದಲ್ಲಿ ಸಡಗರ ಸಂಭ್ರಮ ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮದ ಪುರಾತನ ಕೋಟೆಯ ಬಳಿ ಸುಮಾರು 30 ಮೀಟರ್ ಉದ್ದದ ರಣಗಂಬಕ್ಕೆ ಸೀರೆಯನ್ನು ಸುತ್ತಿ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ ನಂತರ ಗ್ರಾಮದ ಮಹಿಳೆಯರು ಊಡಿ ತುಂಬಿ, ಕಾಯಿ ಒಡೆದು ಪೂಜೆ ಸಲ್ಲಿಸಿದರು.
ಈ ರಣಗಂಬ ಉತ್ಸವಕ್ಕೆ ನೇರೆಯ ರಾಜ್ಯಗಳಾದ ಮಹಾರಾಷ್ಟ್ರ ತೆಲಂಗಾಣ ಜನ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಈ ಉತ್ಸವದಲ್ಲಿ ಗ್ರಾಮದ ಜನ ಜಾತಿ ಭೇದವಿಲ್ಲದೆ ಎಲ್ಲರೂ ಭಕ್ತಿ ಭಾವದಿಂದ ರಣಗಂಬ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.
ಬಸವರಾಜ ದೇಶಮುಖ, ಶರಣಬಸಪ್ಪ ದೇಶಮುಖ, ಉಮಾ ದೇಶಮುಖ ಮತ್ತು ದೇಶಮುಖ ಮನೆತನದ ಮಕ್ಕಳು ಮತ್ತು ಸೊಸೆಯಂದಿರು ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೀರಪ್ಪ ಖಾನಾಪುರೆ, ಶಿವರಾಜ ಬುಣಗೆ, ಜಗನ್ನಾಥ ಪಟ್ನೆ, ಶಂಕ್ರಪ್ಪ ಗುಮ್ಮೆ, ಶಂಕ್ರಪ್ಪ ಧರ್ಮಜೆ, ಶರಣಪ್ಪ ತೇಗಂಪುರೆ, ಜಗನ್ನಾಥ ಆಲೂರೇ, ಪ್ರಶಾಂತ ಬುಣಗೆ, ಸಂದೀಪ ಸೌಲೆ, ಮಲ್ಲಪ್ಪ ನೇಳಗೆ, ರವಿ ಸ್ವಾಮಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ರಣಗಂಬ ಉತ್ಸವದ ಇತಿಹಾಸ
ಪರಂಪರಾಗತವಾಗಿ ಈ ಉತ್ಸವವನ್ನು ಆಚರಿಸುಕೊಂಡು ಬರಲಾಗುತ್ತಿದ್ದು ಅದಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ದೇಶಮುಖರೆಂಬ ಪಾಳೆಗಾರರು ವಡಗಾಂವ ನಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂಬ ಪ್ರತಿತಿ ಇದ್ದು ಅವರು ವಿರೋಧಿ ಪಡೆಯ ಸೈನ್ಯವನ್ನು ಯುದ್ಧದಲ್ಲಿ ಸೋಲಿಸಿದ ಸವಿನೆನಪಿಗಾಗಿ ಬೃಹತ್ ಗಾತ್ರದ ಕಟ್ಟಿಗೆಯ ದಿಮ್ಮಿಯನ್ನು ದೇಶಮುಖರ ಕೋಟೆಯ (ಸ್ಥಳೀಯವಾದ ಗಡಿ) ಮುಂಭಾಗದ ಆವರಣದಲ್ಲಿ ಮೇಲಕ್ಕೆ ಎತ್ತಿ ನಿಲ್ಲಿಸಿ ವಿಜಯೋತ್ಸವ ಆಚರಿಸುವುದೆ ಈ ರಣಗಂಬ ಉತ್ಸವ.