ರಣಂ ಚಿತ್ರ ಬಿಡುಗಡೆ: ಅಭಿಮಾನಿಗಳ ಸಂಭ್ರಮ

ಕುಣಿಗಲ್, ಮಾ. ೨೭- ಸಾಮಾಜಿಕ ಕಾರ್ಯಕರ್ತ ಜನಪರ ಹೋರಾಟಗಾರ ಆ ದಿನಗಳು ಖ್ಯಾತಿಯ ನಟ ಚೇತನ್ ಅಭಿನಯದ ರಣಂ ಚಲನಚಿತ್ರ ತೆರೆ ಕಂಡಿದ್ದು, ಕುಣಿಗಲ್‌ನ ಆಕಾಶ್ ಚಿತ್ರಮಂದಿರದ ಹತ್ತಿರ ದಲಿತ ಪರ ಸಂಘಟನೆಯ ಮುಖಂಡರು ಕಾಡುಗೊಲ್ಲ ಸಂಘಟನೆಯ ಮುಖಂಡರು, ಚೇತನ್ ಅಭಿಮಾನಿಗಳು ಹಾಗೂ ವಿದ್ಯಾರ್ಥಿ ಯುವಕರು ಹಾಜರಾಗಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಚೇತನ್ ಅವರ ಹೋರಾಟ ಕುರಿತು ಮಾತನಾಡಿದ ನಾಗಣ್ಣ ಜಿ.ಕೆ. ಅವರು ಚೇತನ್ ಅವರು ನಿಜ ಜೀವನದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಪೆರಿಯಾರ್, ಪುಲೆ ಅವರ ಸಿದ್ದಾಂತವನ್ನು ಅಳವಡಿಸಿಕೊಂಡಿದ್ದು, ನಾಡಿನ ದಲಿತರು, ಆದಿವಾಸಿಗಳು, ಬುಡಕಟ್ಟು, ಜನರು ರೈತರು ಹಾಗೂ ಮಹಿಳಾ ಪರವಾಗಿ ಹೋರಾಟ ಮಾಡುತ್ತಿದ್ದು, ಧ್ವನಿ ಇಲ್ಲದವರ ಧ್ವನಿಯಾಗಿದ್ದಾರೆ. ಈಗ ಬಿಡುಗಡೆಗೊಂಡಿರುವ ರಣಂ ಚಿತ್ರವು ರೈತರ ಜ್ವಲಂತ ಸಮಸ್ಯೆಗಳನ್ನು ಕುರಿತು ಬೆಳಕು ಚೆಲ್ಲುವುದರ ಜತೆಗೆ ಇವತ್ತಿನ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆದ್ದರಿಂದ ಸಮಾಜದ ಎಲ್ಲಾ ವರ್ಗದ ಜನರು ರಣಂ ಚಿತ್ರ ನೋಡಿ ಚೇತನ್ ಅವರನ್ನು ಬೆಂಬಲಿಸಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ದಲಿತ್ ನಾರಾಯಣ್, ರಾಮಲಿಂಗಯ್ಯ, ಸಿದ್ದರಾಜು, ಪ್ರಶಾಂತ್, ಕಾಡುಗೊಲ್ಲ ಮುಖಂಡರಾದ ಗಿರೀಶ್, ಶಿವಲಿಂಗಯ್ಯ, ಗೋವಿಂದರಾಜು, ಧನಂಜಯ್ಯ, ರಾಜೇಶ್, ದಯಾಭವನ ರಮೇಶ್ , ತಿಮ್ಮಯ್ಯ, ಪುರಸಭಾ ಸದಸ್ಯರಾದ, ಮಲ್ಲಿಪಾಳ್ಯ ಶ್ರೀನಿವಾಸ್, ಅಜಾಮ್, ದೇವರಾಜು ಮತ್ತಿತರರು ಉಪಸ್ಥಿತರಿದ್ದರು.