ರಟಕಲ್‍ನಲ್ಲಿ ಟಿಪ್ಪು ಸುಲ್ತಾನ್ ನಾಮಫಲಕ ಸಕ್ರಮ: ಹಿಂದೂ ಜಾಗೃತಿ ಸೇನೆ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ,ಜ.20: ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಟಿಪ್ಪು ಸುಲ್ತಾನ್ ಹೆಸರಿನ ನಾಮಫಲಕವು ಸಕ್ರಮವಾಗಿದ್ದು, ಆ ಕುರಿತು ಸುಳ್ಳು ಆರೋಪ ಮಾಡಿರುವ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಎಸ್. ಭಂಡಾರಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಟಕಲ್ ಗ್ರಾಮದಲ್ಲಿ ಮಹಾತ್ಮಾ ಬಸವೇಶ್ವರರ ವೃತ್ತ ನಿರ್ಮಾಣವಾಗುವುದಕ್ಕಿಂತ ಏಳೆಂಟು ವರ್ಷಗಳ ಮೊದಲೇ ಹಜರತ್ ಟಿಪ್ಪು ಸುಲ್ತಾನ್‍ರ ಚೌಕ್ ನಿರ್ಮಾಣಕ್ಕಾಗಿ ಪಂಚಾಯಿತಿ ವ್ಯಾಪ್ತಿಯ ಜಾಗ ಕಬ್ಜೆ ಮಾಡಿ, ಅದಕ್ಕೆ ಬೇಕಾಗುವ ಕಲ್ಲುಗಳನ್ನು ಕೂಡ ಹಾಕಿ, ಆ ಸ್ಥಳವನ್ನು ಬೇರೆ ಯಾರೂ ಕಬಳಿಸದಂತೆ ಅಲ್ಲಿ ಹಜರತ್ ಟಿಪ್ಪು ಸುಲ್ತಾನರ ಭಾವಚಿತ್ರ ಇರುವ ಸಣ್ಣ ಫಲಕವನ್ನು ಹಾಕಿ, ಕಾನೂನು ಬದ್ಧವಾಗಿ ಗ್ರಾಮ ಪಂಚಾಯಿತಿ ರಟಕಲ್‍ದಿಂದ ಕಟ್ಟಡ ರಚನೆಗಾಗಿ ಕಳೆದ 2016ರ ಏಪ್ರಿಲ್ 18ರಂದು ಮಂಜೂರಾತಿ ಪಡೆಯಲಾಗಿದೆ ಎಂದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಟ್ಟಡ ರಚಿಸತಕ್ಕದ್ದು ಎಂಬ ಶರತ್ತಿನ ಮೇಲೆ ರಟಕಲ್ ಗ್ರಾಮ ಪಂಚಾಯಿತಿಯವರು ಟಿಪ್ಪು ಸುಲ್ತಾನ್‍ರ ಕಟ್ಟೆ ನಿರ್ಮಾಣಕ್ಕಾಗಿ ಅನುಮತಿ ಕೊಟ್ಟಿದ್ದಾರೆ. ಆ ಸ್ಥಳವು ಸಹ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ಕಳೆದ 2018ರ ಸೆಪ್ಟೆಂಬರ್ 6ರಂದು ನೊಂದಣಿಯಾಗಿದೆ. ಅದಕ್ಕಾಗಿ ಗ್ರಾಮ ಪಂಚಾಯಿತಿಯಿಂದ ಸ್ಕೆಚ್ ಮ್ಯಾಫ್ ಫಾರಂ ನಂಬರ್ 11 ಹಾಗೂ ಕಟ್ಟಡ ರಚನೆಯ ಕುರಿತು ಪರವಾನಿಗೆ ನೀಡಿದ್ದರ ಆಧಾರದ ಮೇಲೆ ರಾಜ್ಯ ವಕ್ಫ್ ಮಂಡಳಿಯಲ್ಲಿ ನೊಂದಣಿ ಕೂಡ ಮಾಡಲಾಗಿದೆ ಎಂದು ಅವರು ಹೇಳಿದರು.
ಇಷ್ಟೆಲ್ಲ ಕಾನೂನುಬದ್ಧ ದಾಖಲಾತಿಗಳು ಇದ್ದರೂ ಕೂಡ ಕೆಲ ಮತಾಂಧ ಪುಂಡರು ಹಿಂದೂ ಧರ್ಮದ ಹೆಸರಿಗೆ ಅಪಚಾರ ಎಸಗುವಂತಹ ಕೃತ್ಯ ಮಾಡುತ್ತಿದ್ದಾರೆ ಎಂದು ದೂರಿದ ಅವರು, ಹಜರತ್ ಟಿಪ್ಪು ಸುಲ್ತಾನರ ಭಾವಚಿತ್ರದ ಬಗ್ಗೆಯಾಗಲಿ, ಅಥವಾ ಕಟ್ಟೆಯ ನಿರ್ಮಾಣದ ಕುರಿತು ರಟಕಲ್ ಗ್ರಾಮದ ಯಾರಲ್ಲಿಯೂ ವಿರೋಧವಾಗಲಿ ಅಥವಾ ದ್ವೇಷವಾಗಲಿ ಇಲ್ಲ. ಆದಾಗ್ಯೂ, ಹಿಂದೂ ಜಾಗೃತಿ ಸೇನೆ ಎಂಬ ಹೆಸರಿನ ಸಂಘ ಕಟ್ಟಿಕೊಂಡು ಕಳೆದ 2022ರ ಮೇ 14ರಂದು ಅನಾವರಣಗೊಂಡ ಮಹಾತ್ಮಾ ಬಸವೇಶ್ವರರ ಪುತ್ಥಳಿಯ ರಸ್ತೆಯ ಪಕ್ಕದ ಹತ್ತಿರದಲ್ಲಿರುವ ಹಜರತ್ ಟಿಪ್ಪು ಸುಲ್ತಾನರ ಭಾವಚಿತ್ರಕ್ಕೆ ಮತ್ತು ನ್ಯಾಯಬದ್ಧವಾದ ಜಾಗಕ್ಕೆ ವಿರೋಧ ಮಾಡುತ್ತಿರುವುದು ಮುಸ್ಲಿಂರಿಗೆ ಸಂಬಂಧಪಟ್ಟ ಸ್ಥಳ ಎನ್ನುವ ಒಂದೇ ಒಂದು ಕಾರಣಕ್ಕಾಗಿಯೇ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಅವರು ಆರೋಪಿಸಿದರು.
ಸಮಾಜದ ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ಮತೀಯ ಮನಸ್ಸಿನ ಕೆಲ ಪುಂಡರು ಹಜರತ್ ಟಿಪ್ಪು ಸುಲ್ತಾನರನ್ನು ಮತಾಂಧ ಎಂದು ಟೀಕಿಸಿರುವುದು ಹಾಗೂ ಮುಸ್ಲಿಂ ಜಿಹಾದಿಗಳು ಎಂದು ನಿಂದನೆ ಮಾಡಿರುವುದು ಬೆಂಕಿ ಹಚ್ಚುವ ಕೆಲಸವಾಗಿದೆ. ಪ್ರಚೋದನಕಾರಿ ಹೇಳಿಕೆಯು ಸಮಾಜದಲ್ಲಿ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಆದ್ದರಿಂದ ಪೋಲಿಸರು ಸ್ವಯಂ ಪ್ರೇರಿತವಾಗಿ ಸುಳ್ಳು ಆರೋಪ ಮಾಡಿರುವ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆ ಸ್ಥಳದಲ್ಲಿ ನಾಮಫಲಕವು ಸಕ್ರಮವಾಗಿದೆ. ಹಾಗಾಗಿ ಅವರು ಮೋದಿ ಅವರಪ್ಪನ ಹತ್ತಿರ ಹೋದರೂ ಸಹ ಅದು ಅಕ್ರಮ ಆಗಲಾರದು. ಕೂಡಲೇ ಇಂತಹ ಸುಳ್ಳು ಆರೋಪಗಳನ್ನು ಮಾಡಿ ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗ ತರುತ್ತಿರುವುದರಿಂದ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಮೋಹನ್ ಎಸ್. ಚಿನ್ನಾ, ಮುಖಂಡರಾದ ಹಮಿದಮಿಯ್ಯಾ ತಂದೆ ಬಾಬುಮಿಯ್ಯಾ ಸುಲೇಗಾಂವ್, ಖಾಸಿಂ ಅಲಿ ತಂದೆ ಮಹೆಬೂಬಸಾಬ್ ಮಸಾಲದಾರ್, ಶೌಕತ್ ಅಲಿ ತಂದೆ ವಜೀರಸಾಬ್, ನಾಗರಾಜ್ ಬೇವಿನಕರ್ ಮುಂತಾದವರು ಉಪಸ್ಥಿತರಿದ್ದರು.