* ಮೇಲಾಧಿಕಾರಿಗಳಿಗೆ ಪತ್ರ
* ಕೇಳಿದ್ದು 30 , ನೀಡಿದ್ದು 5 ದಿನ ರಜೆ
* ನಿಮ್ಮ ಒತ್ತಡ, ಕಿರುಕುಳ ನಿಭಾಯಿಸುವ ಶಾಂತಿ ಮಂತ್ರ ಕಲಿತು ಬರುವೆ
* ನಿರ್ಲಕ್ಷದ ಆಡಳಿತ ಪ್ರದರ್ಶನ
* ನಿಮ್ಮ ಸುಳ್ಳು, ಕಿರುಕುಳ, ತಾರತಮ್ಯ, ಮೋಸ ದಿಂದ ಮಾನಸಿಕ ನೆಮ್ಮದಿ ಹಾಳು
* ಈ ಹಿಂದೆ ಐಜಿ ವಿರುದ್ದವೂ ದೂರು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.21: ರಜೆ ನೀಡುವ ವಿಚಾರದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ದ ಜಿಲ್ಲೆಯ ತೋರಣಗಲ್ಲಿನ ಡಿವೈಎಸ್ಪಿ ಎಸ್.ಎಸ್. ಕಾಶಿ ಅವರು ಪತ್ರ ಬರೆದು ಸಮರ ಸಾರಿದ್ದಾರೆ. ಸ್ವತಃ ಜಿಲ್ಲೆಯ ಎಸ್ಪಿ ರಂಜಿತ್ ಕುಮಾರ್ ಅವರ ಬಗ್ಗೆ ಕರ್ತವ್ಯದ ಕಿರುಕುಳದ ಆರೋಪ ಮಾಡಿದ್ದಾರೆ.
ತಾವು ಒಂದು ತಿಂಗಳು ರಜೆ ಕೋರಿದರೆ 5 ದಿನ ಮಾತ್ರ ರಜೆ ಮಂಜೂರು ಮಾಡಿದಕ್ಕೆ ತಮ್ಮ ಅಕ್ರೋಶವನ್ನು ಡಿವೈಎಸ್ಪಿ ಕಾಶಿ ಹೊರ ಹಾಕಿದ್ದು ಈ ಸಂದರ್ಭದಲ್ಲಿ ಎಸ್ಪಿ ಅವರ ಕಾರ್ಯವೈಖರಿ ಬಗ್ಗೆ ಸಹ ಅಸಹನೆ ವ್ಯಕ್ತಪಡಿಸಿದ್ದಾರೆ.
ವ್ಯಯಕ್ತಿಕ ಕಾರಣಕ್ಕೆ ಕಳೆದ ತಿಂಗಳ 25 ರಂದು ಪತ್ರ ಬರೆದು ಒಂದು ತಿಂಗಳು ಕಾಲ ರಜೆ ಕೋರಿದ್ದರು ಕಾಶಿ ಅವರು ಆದರೆ ಎಸ್ಪಿ ಅವರು ಕೇವಲ 5 ದಿನ ಮಾತ್ರ ರಜೆ ಮಂಜೂರು ಮಾಡಿದ್ದಾರೆ.
ಅದಕ್ಕೆ ಬೇಸತ್ತು ಮೇ 16 ರಂದು ಪತ್ರ ಬರೆದು ಅದರಲ್ಲಿ
ಒಂದು ತಿಂಗಳ ರಜೆ ಕೇಳಿದರೆ ತಾವು 5 ದಿನಗಳ ಪರಿವರ್ತಿತ ರಜೆಯನ್ನು ಮಂಜೂರು ಮಾಡಿದ್ದು, ಉಳಿದ 25 ದಿನಗಳ ರಜೆ ಮಂಜೂರು ಮಾಡಲು ತಮಗಿದ್ದ ತೊಂದರೆ, ತೊಡಕು ಅಥವಾ ಅಸಹಾಯಕತೆ ಅಥವಾ ಅನಿವಾರ್ಯತೆ ಬಗ್ಗೆ ತಿಳಿಸದೇ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.
ನೀವು ಕಣ್ತಪ್ಪಿನಿಂದ 5 ದಿನ ಪರಿವರ್ತಿತ ಮಂಜೂರು ಮಾಡಿದ್ದೀರೋ ಅಥವಾ ಉದ್ದೇಶಪೂರ್ವಕವಾಗಿ ರಜೆಯನ್ನು ತಡೆ ಹಿಡಿದಿದ್ದೀರೋ ಅಥವಾ ನನ್ನ ಖಾತೆಯಲ್ಲಿ ರಜೆ ಇಲ್ಲವೋ ಯಾವುದನ್ನೂ ಸ್ಪಷ್ಟವಾಗಿ ನಮೂದಿಸದೇ ಮತ್ತೊಮ್ಮೆ ತಾವು ತಮ್ಮ ನಿರ್ಲಕ್ಷ ಆಡಳಿತದ ವೈಖರಿಯನ್ನು ಪ್ರದರ್ಶಿಸಿದ್ದೀರಿ.
ನಾನು ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದು, ಕಾರಣಗಳನ್ನು ವಿವರಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಇಲ್ಲವೆಂದು ಭಾವಿಸಿದ್ದೇನೆ. ಆದರೆ ಈಗ ಅದನ್ನು ತಿಳಿಸುವ ಅನಿವಾರ್ಯತೆಯನ್ನು ತಾವು ಸೃಷ್ಠಿಸಿದ್ದೀರಿ, ನಿಮ್ಮ ಆಡಳಿತವು ತಾರತಮ್ಯ, ಕಿರುಕುಳ, ಸುಳ್ಳು, ಮೋಸದಿಂದಾಗಿ ನೀವು ನನ್ನ ಮಾನಸಿಕ ನೆಮ್ಮದಿಯನ್ನು ಸತತವಾಗಿ ಕದಡುತ್ತಾ ಬಂದಿದ್ದೀರಿ, ನಿಮ್ಮ ಈ ರೀತಿಯ ವರ್ತನೆಯು ಮುಂದುವರೆದು ನಿಮ್ಮ ಅಧೀನದಲ್ಲಿ ಇದೇ ಪರಿಸ್ಥಿತಿಯಲ್ಲಿ ನನ್ನ ಕೆಲಸವನ್ನು ಮುಂದುವರೆಸಿದಲ್ಲಿ ನನಗೆ ಮಾನಸಿಕ ಕ್ಷೋಬೆ ಅಥವಾ ಖಿನ್ನತೆಗೆ ಒಳಗಾಗುವ ಸಂಭವ ಇರುವುದರಿಂದ ಕೆಲಕಾಲಮಟ್ಟಿಗಾದರೂ ನಿಮ್ಮ ಕಿರುಕುಳದಿಂದ ದೂರವಾಗಿ ಮನಸ್ಸಿಗೆ ಶಾಂತಿ ಸದೃಡತೆ, ಪಡೆಯುವ ಉದ್ದೇಶಕ್ಕಾಗಿ ನನಗೆ ಯೋಗ ಧ್ಯಾನ, ಪ್ರಾರ್ಥನೆಯಂತಹ ಮಾನಸಿಕ ಸ್ಥಿಮಿತತೆ ಕಂಡುಕೊಳ್ಳಲು ಧಾನ್ಯ, ಯೋಗ. ಪ್ರಾರ್ಥನೆ ಮಾಡಲು ರಜೆ ಬೇಕಾಗಿದೆ.
ನಮ್ಮ ಸಂಸ್ಕೃತಿಯ ಸಂಸ್ಕಾರಗಳನ್ನು ರೂಢಿಸಿಕೊಳ್ಳಲು ಅವಶ್ಯಕತೆ ಇರುವುದರಿಂದ 30 ದಿನಗಳ ಮೊದಲ ಹಂತದ ಪ್ರಯತ್ನವಾಗಿ ರಜೆ ಕೋರಿದ್ದೆನು, ನಿಮ್ಮೊಂದಿಗೆ ಸಂಘರ್ಷಕ್ಕೆ ಆಸ್ಪದವಿಲ್ಲದಂತೆ ಮತ್ತು ನಿಮ್ಮ ಕಿರುಕುಳವನ್ನು ನಿಭಾಯಿಸಿ ಸಾರ್ವಜನಿಕರಿಗೆ ಅನ್ಯಾಯವಾಗದಂತೆ ನನ್ನ ಮಾನಸಿಕ ಸ್ಥಿತಿಯನ್ನು ಸ್ಥಿಮಿತದಲ್ಲಿಟ್ಟುಕೊಂಡು ಕರ್ತವ್ಯನಿರ್ವಹಿಸಲು ನನಗೆ ಯೋಗ, ದ್ಯಾನ, ಪ್ರಾರ್ಥನೆಯಂತಹ ಮಾರ್ಗೋಪಾಯಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ತಾವು ನನ್ನ ಖಾತೆಯಲ್ಲಿದ್ದ 30 ದಿನಗಳ ರಜೆಯನ್ನು ಮಂಜೂರು ಮಾಡಲು ಮತ್ತೊಮ್ಮೆ ಕೋರುವೆ. ಒಂದು ವೇಳೆ ತಾವು ರಜೆ ಮಂಜೂರು ಮಾಡದೇ 5 ದಿನಕ್ಕೆ ಹಿಂದಿರುಗಿ ಬಂದು ಕೆಲಸ ಮಾಡಬೇಕು. ಎಂಬ ಆಶಯ ಮತ್ತು ಉದ್ದೇಶವು ನಿಮ್ಮದಾಗಿದ್ದರೆ ಈ ಪತ್ರ ತಲುಪಿದ 3 ದಿನಗಳ ಒಳಗಾಗಿ ತಾವು ನನಗೆ ಜ್ಞಾಪನ ನೀಡಲು ಕೋರಲಾಗಿದೆ.
ಅಂತಹ ಒತ್ತಡದ ಪರಿಸ್ಥಿತಿಯಲ್ಲಿ ನಾನು ಕರ್ತವ್ಯ ಮಾಡುವುದು ಅನಿವಾರ್ಯವಾಗಿದ್ದಲ್ಲಿ ನನ್ನ ಒತ್ತಡ ನಿಭಾಯಿಸುವಿಕೆಯು ಮಿತಿ ಮೀರಿಹೋದಲ್ಲಿ ಅದರಿಂದ ಸಾರ್ವಜನಿಕರಿಗಾಗಲಿ ಅಥವಾ ಅದೀನ ಸಿಬ್ಬಂದಿಗಳಿಗಾಗಲಿ ಅಥವಾ ಅವಗಡಗಳು, ಅಚಾತುರ್ಯಗಳು ನಡೆದಲ್ಲಿ ಅದಕ್ಕೆ ತಾವೆರ ಸಂಪೂರ್ಣವಾಗಿ ಜವಾಬ್ದಾರಿ ಎಂದು ಭಾವಿಸಿ ಆ ಎಲ್ಲಾ ಜವಬ್ದಾರಿಗಳನ್ನು ತಾವು ಹೊತ್ತುಕೊಳ್ಳುವದಾದಲ್ಲಿ ನನಗೆ ನಿಮ್ಮ ಒತ್ತಡದ ನಡುವೆಯೂ ಕೆಲಸ ಮಾಡಬಲ್ಲೆ. ಯಾವುದೇ ಅಚಾತುರ್ಯಕ್ಕೆ ಅವಗಡಗಳಿಗೆ ನಾನು ಹೊಣೆಗಾರನಾಗಲಾರೆ. ಆದ್ದರಿಂದ ತಮ್ಮ ನಿರ್ಧಾರವನ್ನು ಜನ ಉಲೈ 22 ಒಳಗಾಗಿ ತಿಳಿಸಿದಲ್ಲಿ ಆ ಪ್ರಕಾರ ಕರ್ತವ್ಯಕ್ಕೆ ಬರುತ್ತೇನೆ. ಇಲ್ಲವಾದಲ್ಲಿ ಜುಲೈ 19 ರಿಂದ ರಜೆಯ ಮೇಲೆ ತೆರಳುತ್ತಿದ್ದು ನನ್ನ ಮನವಿಯಂತೆ ನನಗೆ 30 ದಿನಗಳ ರಜಾ ಮಂಜೂರು ಮಾಡುತ್ತೀರಿ ಎಂಬ ನಂಬಿಕೆಯ ಮೇಲೆ ಹೊರಡುತ್ತಿದ್ದೇನೆ.
ಒಂದು ತಿಂಗಳ ನಂತರ ಸದೃಡ ಮನಸ್ಸಿನೊಂದಿಗೆ ನಿಮ್ಮ ಒತ್ತಡ, ಕಿರುಕುಳವನ್ನು ನಿಭಾಯಿಸುವ ಶಾಂತಿ ಮಂತ್ರ ಕಲಿತು ಬರುವ ವಿಶ್ವಾಸದಲ್ಲಿದೇನೆ. ಮತ್ತೊಮ್ಮೆ ಕಷ್ಟವಾದಲ್ಲಿ ಮುಂದಿನ ಕಾರ್ಯಕ್ರಮ ಕಾಲಾಯ ತಸ್ಮೈ ನಮ: ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಲಾಖೆಯ ಡಿಜಿ ಮತ್ತು ಐಜಿಪಿ, ಎಡಿಜಿಪಿ, ಐಜಿಪಿ ಗಳಿಗೆ ಸಹ ಈ ಪತ್ರ ರವಾನೆ ಮಾಡಿದ್ದಾರೆ.
ಕಾಸದಿ ಅವರ ಆರೋಪ ನಿರಾಕರಣೆ ಮಾಡಿರೋ ಎಸ್ಪಿ ರಂಜಿತ್ ಕುಮಾರ್ ಬಂಡಾರು. ಈ ಕುರಿತು ಇಲಾಖೆ ವಿಚಾರಣೆ ಮಾಡೋದಾಗಿ ಹೇಳಿದ್ದಾರೆ.
ಈ ಹಿಂದೆ ಠಾಣೆಗಳಿಂದ ಪ್ರತಿ ತಿಂಗಳ ಮಾಮೂಲು ನೀಡಬೇಕೆಂಬ ಈ ಹಿಂದಿನ ಐ ಜಿ ವಿರುದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿಯೇ ಪ್ರಶ್ನಿಸಿ ಸುದ್ದಿಗೀಡಾಗಿದ್ದರು ಕಾಶಿ ಅವರು