ರಜನಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ

ನವದೆಹಲಿ, ಏ.೧- ತಮಿಳು ಚಿತ್ರರಂಗದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ೨೦೨೦ ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ.
ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿಕೆ ವಿಷಯವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಇಂದು ತಿಳಿಸಿದ್ದಾರೆ.
೫೧ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್ ಪಾತ್ರರಾಗಿದ್ದಾರೆ . ಭಾರತೀಯ ಚಿತ್ರರಂಗಕ್ಕೆ ರಜನಿಕಾಂತ್ ಅವರು ನೀಡಿರುವ ಕೊಡುಗೆಯನ್ನು ಗಮನಿಸಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ದಕ್ಷಿಣ ಭಾರತದಲ್ಲಿ ೧೨ನೇ ವ್ಯಕ್ತಿ ಈ ಪ್ರಶಸ್ತಿಗೆ ಭಾಜನರಾದ ಹಿರಿಮೆಗೆ ಸೂಪರ್ ಸ್ಟಾರ್ ರಜನಿಕಾಂತ್ ಪಾತ್ರರಾಗಿದ್ದಾರೆ ಇದಕ್ಕೂ ಮುನ್ನ ಡಾ. ರಾಜಕುಮಾರ್, ಅಕ್ಕಿನೇನಿ ನಾಗೇಶ್ವರರಾವ್, ಕೆ. ಬಾಲಚಂದರ್ ಸೇರಿದಂತೆ ಘಟಾನುಘಟಿಗಳು ನಿರ್ಮಾಪಕರು ನಿರ್ದೇಶಕರು ಪ್ರಶಸ್ತಿಗೆ ಪಾತ್ರರಾಗಿದ್ದರು.
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಕನ್ನಡ ತಮಿಳು ತೆಲುಗು ಮಲಯಾಳಂ ಸೇರಿದಂತೆ ಭಾರತೀಯ ಚಿತ್ರರಂಗ ಅಭಿನಂದಿಸಿದೆ.

ಚುನಾವಣೆಗೆ ಮುನ್ನ ಪ್ರಶಸ್ತಿ
ತಮಿಳುನಾಡು ವಿಧಾನ ಸಭೆ ಚುನಾವಣೆ ಏಪ್ರಿಲ್ ೬ ರಂದು ನಡೆಯಲಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಜನರ ಮನಗೆಲ್ಲಲು ಬಿಜೆಪಿ ಇನ್ನಿಲ್ಲದ ಕಸರತ್ತು ಕೈಹಾಕಿದೆ. ಅದರ ಭಾಗವಾಗಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿದೆ.
ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವ ವಿಷಯವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಟ್ವಿಟ್ಟರ್‌ನಲ್ಲಿ ಈ ವಿಷಯ ಖಚಿತಪಡಿಸಿದ್ದಾರೆ.
ತಮಿಳುನಾಡಿನ ರಾಜ್ಯ ಬಿಜೆಪಿಯ ಉಸ್ತುವಾರಿ ಸಿ.ಟಿ. ರವಿ ಸೇರಿದಂತೆ ಅನೇಕರು ರಜನಿಕಾಂತ್ ಅವರನ್ನು ಅಭಿನಂದಿಸಿದರು.