ರಚನಾತ್ಮಕ ಕಾರ್ಯಗಳಿಂದ ಸಮಾಜ ಬಲಗೊಳ್ಳಲಿ: ರಂಭಾಪುರಿ ಜಗದ್ಗುರುಗಳು

ಆಫಜಲಪುರ :ಮಾ.11: ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಎಂಬ 4 ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸದಿದ್ದರೆ ವ್ಯರ್ಥ. ರಚನಾತ್ಮಕ ಶಾಶ್ವತ ಕಾರ್ಯಗಳಿಂದ ಸಮಾಜ ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ್ ಜಗದ್ಗುರುಗಳು ಹೇಳಿದರು.
ಶುಕ್ರವಾರ ಪಟ್ಟಣದ ಸಂಸ್ಥಾನ ಹಿರೇಮಠದಿಂದ ಕಟ್ಟಿದ ಶ್ರೀ ಗುರು ಮಳೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿಶ್ವ ಬಂಧುತ್ವವನ್ನು ಸಾರಿದ ವೀರಶೈವ ಧರ್ಮದಲ್ಲಿ ಕಾಯಕ ಜೀವನಕ್ಕೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ. ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಅದ್ಭುತ ಕಾರ್ಯ ಮಾಡಲು ಸಾಧ್ಯವಾಗುತ್ತದೆ ಎಂದರು.
ಕಾಯಕವೇ ಕಳಾ ಚೈತನ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದರೆ ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದಾರೆ. ಕಾಯಕದಿಂದ ಸಂಪಾದಿಸಿದ್ದನ್ನು ದಾಸೋಹಕ್ಕೆ ಬಳಸಬೇಕೆಂದು ವೀರಶೈವ ಧರ್ಮ ಸಂಸ್ಕøತಿ ಹೇಳುತ್ತದೆ. ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಶ್ರೀ ಮಠದ ಅಭಿವೃದ್ಧಿ ಕಾರ್ಯಗಳ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಕಲ್ಯಾಣ ಮಂಟಪ ನಿರ್ಮಿಸಿ ಇಂದು ಲೋಕರ್ಪಣೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಶ್ರೀಗಳವರಿಗೆ ರೇಶ್ಮೆ ಮಡಿ, ಸ್ಮರಣಿಕೆ, ಫಲ ಪುಷ್ಪವಿತ್ತು ಅವರು ಶುಭ ಹಾರೈಸಿದರು.
ನೇತೃತ್ವ ವಹಿಸಿದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಪೂರ್ವಜರ ಸತ್ಯ ಸಂಕಲ್ಪಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದೇವೆ. ಶ್ರೀ ಮಠದ ಅಭಿವೃದ್ಧಿ ಮತ್ತು ಕಲ್ಯಾಣ ಮಂಟಪ ಪರಿಪೂರ್ಣಗೊಳ್ಳಲು ಭಕ್ತರು ಕೊಟ್ಟ ಸೇವೆ ಸಹಕಾರವನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸೋಲಾಪುರ ಲೋಕಸಭಾ ಸದಸ್ಯ ಗೌಡಗಾಂವ್ ಡಾ. ಜಯಸಿದ್ಧೇಶ್ವರ್ ಶಿವಾಚಾರ್ಯರು ಮಾತನಾಡಿ, ಭಾರತ ದೇಶ ಧರ್ಮ ಸಂಸ್ಕೃತಿಗೆ ಮಹತ್ವ ಕೊಟ್ಟಿದೆ. ಆಧ್ಯಾತ್ಮ ಲೋಕಕ್ಕೆ ಆಚಾರ್ಯರ ಸಂತ ಮಹಾಂತರ ಕೊಡುಗೆ ಅಪಾರ. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶ್ರೀಗಳು ಚಿಕ್ಕ ವಯಸ್ಸಿನಲ್ಲಿ ಗುಣಾತ್ಮಕ ಕಾರ್ಯ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಆಲಮೇಲ್ ಚಂದ್ರಶೇಖರ್ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಳೇದಗುಡ್ಡ ವಿರಕ್ತ ಮಠದ ಒಪ್ಪತ್ತೇಶ್ವರ್ ಸ್ವಾಮಿಗಳು, ಚಿಣಮಗೇರಿ, ಶ್ರೀನಿವಾಸ್ ಸರಡಗಿ, ಸ್ಟೇಶನ್ ಬಬಲಾದ್, ನಾದ್, ಬಸವಕಲ್ಯಾಣ, ಮಾಶಾಳ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಗುರು ಮಳೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪವನ್ನು ಉದ್ಘಾಟಿಸಿದ ಕೇಂದ್ರದ ರಾಸಾಯನಿಕ-ರಸಗೊಬ್ಬರ ಖಾತೆ ಸಚಿವ ಭಗವಂತ್ ಖೂಬಾ ಅವರು ಧರ್ಮ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶಾಸಕರಾದ ಎಂ.ವೈ. ಪಾಟೀಲ್, ರಮೇಶ್ ಭೂಸನೂರ್, ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮೊದಲ್ಗೊಂಡು ಹಲವಾರು ರಾಜಕೀಯ ಧುರೀಣರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಹಕರಿಸಿದ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರು ಗುರು ರಕ್ಷೆ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದ ನಂತರ ಅನ್ನ ದಾಸೋಹ ನೆರವೇರಿತು.