ರಕ್ಷಾ ರಾಮಯ್ಯ ರಾಜ್ಯ ಟೇಬಲ್ ಟೆನ್ನಿಸ್ ಅಧ್ಯಕ್ಷ

ಧಾರವಾಡ,ಸೆ.೧೧-ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅವರು ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈವರೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್‌ಗೆ ಧಾರವಾಡದಲ್ಲಿಂದು ನಡೆದ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಅಧಿಕಾರದ ಅವಧಿ ೬ ವರ್ಷಗಳವರೆಗೆ ಇರುತ್ತದೆ. ಪ್ರಹ್ಲಾದ್ ಜೋಶಿ ಅವರಿಗೂ ಮುನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ರಕ್ಷಾ ರಾಮಯ್ಯ, ಕ್ರೀಡೆ ಯುವ ಸಮೂಹದ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದ್ದು, ಮಾನಸಿಕ ಮತ್ತು ದೈಹಿಕ ವಿಕಾಸಕ್ಕೆ ಪೂರಕವಾಗಿದೆ. ಟೇಬಲ್ ಟೆನ್ನಿಸ್ ಅತ್ಯಂತ ಪ್ರಮುಖ ಕ್ರೀಡೆಯಾಗಿದ್ದು, ಇದರಿಂದ ದೇಹದ ಎಲ್ಲಾ ಅಂಗಾಂಗಳಿಗೂ ವ್ಯಾಯಾಮ ದೊರೆಯುತ್ತದೆ. ಏಕಾಗ್ರತೆಯ ಪ್ರತೀಕವಾಗಿರುವ ಟೇಬಲ್ ಟೆನ್ನಿಸ್ ಕ್ರೀಡೆಯನ್ನು ರಾಜ್ಯದಲ್ಲಿ ಮತ್ತಷ್ಟು ಪ್ರಗತಿ ಪಥದತ್ತ ಕೊಂಡೊಯ್ಯಲು ಮತ್ತು ಪ್ರೋತ್ಸಾಹಿಸಲು ಶ್ರಮಿಸುವುದಾಗಿ ಹೇಳಿದರು.