ರಕ್ಷಣಾ ತಡೆಗೋಡೆಗಳಿಲ್ಲದ ಕೆರೆ ಕಾಲುವೆಗಳು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.29:- ತಾಲೂಕಿನಾದ್ಯಂತ ನೀರಾವರಿ ಇಲಾಖೆಗೆ ಸೇರಿದ ಕಾಲುವೆಗಳು ಮತ್ತು ಕೆರೆಗಳು ರಕ್ಷಣಾ ತಡೆಗೋಡೆಗಳಿಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ತಡೆಗೋಡೆಗಳಿಲ್ಲದೆ ಅಲ್ಲಲ್ಲಿ ವಾಹನಗಳು ಪ್ರಯಾಣಿಕರ ಸಮೇತ ಕಾಲುವೆಗೆ ಉರುಳಿ ಜೀವಹಾನಿಯಾಗುತ್ತಿದ್ದರೂ ತಾಲೂಕಿನ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ತಾಲೂಕು ವ್ಯಾಪ್ತಿಯಲ್ಲಿ ಹೇಮಾವತಿ ಜಲಾಶಯದ ವ್ಯಾಪ್ತಿಗೆ ಸೇರಿದ ಹೇಮಾವತಿ ಎಡದಂಡೆ ನಾಲೆ, ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆ ಹಾಗೂ ಹೇಮಗಿರಿ ನದಿ ಅಣೆಕಟ್ಟೆ ನಾಲೆ, ಶ್ರೀರಾಮದೇವರ ನಾಲೆಗಳಿದ್ದು ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುತ್ತಿವೆ. ರಾಜ್ಯ ಸರ್ಕಾರ ಕೋಟ್ಯಂತರ ರೂ ವ್ಯಯಿಸಿ ಈ ನಾಲೆಗಳನ್ನು ಆಧುನೀಕರಣ ಮಾಡಿಸಿದೆ. ಆದರೆ ನಿಯಮಾನುಸಾರ ಎಲ್ಲಿಯೂ ತಡೆಗೋಡೆಗಳನ್ನು ಅಳವಡಿಸದೆ ಹಣವನ್ನು ದುರ್ಭಳಕೆ ಮಾಡಲಾಗಿದೆ. ಕೆಲವು ಕಡೆ ಸೇತುವೆಗಳ ತಡೆಗೋಡೆಗಳೂ ಬಿದ್ದು ಹೋಗಿದ್ದು ರೈತರು ತಮ್ಮ ಎತ್ತಿನ ಗಾಡಿಗಳು ಮತ್ತು ಟ್ರ್ಯಾಕ್ಟರ್ ಗಳನ್ನು ಜೀವಭಯದಲ್ಲಿಯೇ ಚಲಾಯಿಸಬೇಕಾಗಿದೆ.
ತಾಲೂಕಿನ ಸಾರಂಗಿ, ಪಿ.ಬಿ.ಮಂಚನಹಳ್ಳಿ ಮುಂತಾದ ಕಡೆ ಈ ಹಿಂದೆ ವಾಹನಗಳು ಮತ್ತು ಎತ್ತಿನ ಗಾಡಿಗಳು ನೀರಿಗೆ ಬಿದ್ದು ಅವಘಡ ಸಂಭವಿಸಿದ್ದರೂ ನೀರಾವರಿ ಇಲಾಖೆಯಾಗಲೀ ಅಥವಾ ತಾಲೂಕು ಆಡಳಿತವಾಗಲೀ ಮುನ್ನೆಚ್ಚರಿಕೆಯ ಕ್ರಮವನ್ನು ವಹಿಸಿಲ್ಲ. ಕಾಲುವೆ ಏರಿಗಳ ಮೇಲೆ ನಿತ್ಯ ಸಂಚರಿಸುವ ರೈತರ ಜೀವದ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ತಾಲೂಕಿನ ಬೀರುವಳ್ಳಿ ಗ್ರಾಮದ ಬಳಿಯಿರುವ ಚಂದುಗೋನಹಳ್ಳಿ ಅಮ್ಮನವರ ಸುಕ್ಷೇತ್ರಕ್ಕೆ ಪ್ರತಿ ವಾರ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ದೇವಾಲಯದ ಬಳಿ ಅಪಾಯಕಾರಿ ತಿರುವಿನಲ್ಲಿ ಮಂದಗೆರೆ ಬಲದಂಡೆ ನಾಲೆಯಿದ್ದರೂ ಇದಕ್ಕೆ ರಕ್ಷಣಾ ತಡೆಗೋಡೆ ಅಳವಡಿಸಿಲ್ಲ.
ಮಾಕವಳ್ಳಿ ಬಳಿಯ ವಡ್ಡರಹಳ್ಳಿ ಗ್ರಾಮದ ಬಳಿ ಹೇಮಾವತಿ ಎಡದಂಡೆ ನಾಲೆ ಸೇತುವೆ ಮೇಲೆ ತಡೆಗೋಡೆಯಿಲ್ಲದೆ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವಂತಿದೆ. ತಡೆಗೋಡೆಯಿಲ್ಲದಿರುವುದರಿಂದ ರಾತ್ರಿವೇಳೆಯಲ್ಲಿ ವಾಹನ ಸವಾರರು ಯಾವುದೇ ಕ್ಷಣದಲ್ಲಿ ಅಪಾಯಕ್ಕೆ ಸಿಲುಕಬಹುದು. ಇದೆಲ್ಲ ತಿಳಿದಿದ್ದರೂ ಹೇಮಾವತಿ ಎಡದಂಡೆ ಕಾಲುವೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ತಡಗೋಡೆಯಲ್ಲೂ ಗೋಲ್ ಮಾಲ್:
ತಾಲೂಕು ವ್ಯಾಪ್ತಿಯಲ್ಲಿ ಹೇಮಾವತಿ ಜಲಾಶಯದ ಎಡದಂಡೆ ಮುಖ್ಯ ಕಾಲುವೆ 106 ನೇ ಕಿ.ಮೀ ನಿಂದ ಆರಂಭವಾಗಿ 150.975 ನೇ ಕಿ.ಮೀ ವರೆಗೆ ಒಟ್ಟು 45.956 ಕಿ.ಮೀ ಉದ್ದ ಹಾದು ಹೋಗಿದೆ. ಈ ಬೃಹತ್ ಕಾಲುವೆಯ ಮೂಲಕ ಬೃಹತ್ ಪ್ರಮಾಣದ ನೀರು ರಭಸವಾಗಿ ಹರಿದು ಹೋಗುತ್ತದೆ. ಹೇಮಾವತಿ ಎಡದಂಡೆ ನಾಲೆಯ ಸರಪಳಿ 72.260 ರಿಂದ 214.300 ಕಿ.ಮೀ ವರೆಗೆ ನಾಲೆಯನ್ನು 883.50 ಕೋಟಿ ರೂ ವೆಚ್ಚದಲ್ಲಿ ಅಧುನೀಕರಣ ಮಾಡಿಸಲಾಗಿದೆ. ಸದರಿ ನಾಲೆಯ ಅಧುನೀಕರಣ ಕಾಮಗಾರಿಯ ಗುತ್ತಿಗೆಯನ್ನು ಮುದ್ದೆಬಿಹಾಳ ತಾಲೂಕಿನ ಎಂ.ವೈ.ಕಟ್ಟಿಮನಿ ಬಿನ್ ಯಮನಪ್ಪ ಎನ್ನುವ ಪ್ರಥಮದರ್ಜೆ ಗುತ್ತಿಗೆದಾರರಿಗೆ 21.02.2018 ರಂದು ವಹಿಸಲಾಗಿದೆ. ನಿಯಮಾನುಸಾರ ಗುತ್ತಿಗೆದಾರ ಕಾಲುವೆ ಏರಿಯ ಉದ್ದಕ್ಕೂ ರಕ್ಷಣಾ ತಡಗೋಡೆಗಳನ್ನು ಹಾಕಬೇಕು. ಒಂದು ರಕ್ಷಣಾ ಕಲ್ಲಿಗೆ 2239 ರೂಗಳಂತೆ ಒಟ್ಟು 21358 ಕಲ್ಲುಗಳಿಗೆ ನೀರಾವರಿ ಇಲಾಖೆ 4,78,20,562 ರೂಗಳನ್ನು ಸದರಿ ಗುತ್ತಿಗೆದಾರನಿಗೆ ಬಿಲ್ ಮಾಡಿದೆ. ಆದರೆ ಸದರಿ ಗುತ್ತಿಗೆದಾರ ಕಾಲುವೆ ಏರಿಯ ಮೇಲೆ ಇದುವರೆಗೂ ಒಂದೇ ಒಂದು ಗಾರ್ಡ್ ಸ್ಟೋನ್ ( ರಕ್ಷಣಾ ತಡೆಗೋಡೆ ಕಲ್ಲುಗಳು ) ಅಳವಡಿಸಿಲ್ಲ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಜಿ.ಆರ್.ಜಯಣ್ಣ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರನ್ನೂ ನೀಡಿದ್ದಾರೆ. ನೀರಾವರಿ ಇಲಾಖೆಯ ಅಕ್ರಮದ ಬಗ್ಗೆ ತನಿಖೆಗೆ ಒತ್ತಾಯಿಸುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಯಾವುದೇ ಕ್ರಮ ಜರುಗಿಸಿ ಹಣ ಪಡೆದಿರುವ ಗುತ್ತಿಗೆದಾರನಿಂದ ನಾಲಾ ಏರಿಯ ಮೇಲೆ ಗಾರ್ಡ್ ಸ್ಟೋನ್‍ಗಳನ್ನು ಅಳವಡಿಸಿ ಜನರ ಜೀವ ಕಾಪಾಡಬೇಕೆಂಬ ಮನಸ್ಸು ಮಾಡಿಲ್ಲ. ಅಪಾಯ ಸಂಭವಿಸುವ ಮುನ್ನ ನೀರಾವರಿ ಇಲಾಖೆ ತನ್ನ ವ್ಯಾಪ್ತಿಯ ಎಲ್ಲಾ ನಾಲೆಗಳು ಮತ್ತು ಕೆರೆ ಕಟ್ಟೆಗಳ ಮೇಲೆ ತಡೆಗೋಡೆಗಳನ್ನು ನಿರ್ಮಿಸಿ ಜನರ ಜೀವ ಹಾನಿಯಾಗುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಜಿ.ಆರ್.ಜಯಣ್ಣ ಒತ್ತಾಯ ಮಾಡಿದ್ದಾರೆ.