ರಕ್ಷಣಾ ಇಲಾಖೆ ಉದ್ಯೋಗ ಅವಕಾಶ ಬಳಸಿಕೊಳ್ಳಿ: ಭಗವಂತ ಖೂಬಾ

ಬೀದರ: ನ.9:ಕಲ್ಯಾಣ ಕರ್ನಾಟಕ ಭಾಗದ ಯುವಕರು ರಕ್ಷಣಾ ಇಲಾಖೆಯಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಕೇಂದ್ರದ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸಲಹೆ ಮಾಡಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಸಹಯೋಗದಲ್ಲಿ ಇಲ್ಲಿಯ ಗ್ಲೊಬಲ್ ಸೈನಿಕ ಅಕಾಡೆಮಿಯಲ್ಲಿ ನಡೆಯುತ್ತಿರುವ ಸೇನಾ ಪೂರ್ವ ತರಬೇತಿ ಶಿಬಿರಕ್ಕೆ ಸೋಮವಾರ ಭೇಟಿ ನೀಡಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸೇನಾ ಪೂರ್ವ ತರಬೇತಿಯಿಂದ ಸೇನೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಲು ನೆರವಾಗಲಿದೆ. ಶಿಸ್ತು, ಸಂಯಮ, ಸಮಯ ಪ್ರಜ್ಞೆಯೊಂದಿಗೆ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಸಹ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದ 250 ಅಭ್ಯರ್ಥಿಗಳನ್ನು ಸೇನೆಗೆ ಸೇರಿಸುವ ಸಂಕಲ್ಪದೊಂದಿಗೆ ಸೇನಾ ಪೂರ್ವ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಅವರ ಶ್ರಮ ಫಲ ಕೊಡಲಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು 2025 ರ ವೇಳೆಗೆ ಈ ಭಾಗವನ್ನು ಮಾದರಿಯನ್ನಾಗಿ ಮಾಡುವ ದಿಸೆಯಲ್ಲಿ ವಿವಿಧ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಎಲ್ಲ ಕ್ಷೇತ್ರಗಳ ಪ್ರಗತಿಗೂ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಈ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು ಎನ್ನುವುದೇ ಸಂಘದ ಅಪೇಕ್ಷೆಯಾಗಿದೆ ಎಂದು ಹೇಳಿದರು.

ಸಂಘದಿಂದ ರಕ್ಷಣೆ, ಕೃಷಿ, ಶಿಕ್ಷಣ, ಮಹಿಳಾ ಸ್ವಾವಲಂಬನೆ, ಯುವಕರ ಸಬಲೀಕರಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹತ್ತು ಹಲವು ಕಾರ್ಯಗಳು ನಡೆದಿದೆ ಎಂದು ತಿಳಿಸಿದರು.

ಗ್ಲೊಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ಸೇನೆಗೆ ಸೇರುವ ಜಿಲ್ಲೆಯ ಅಭ್ಯರ್ಥಿಗಳ ಕನಸು ನನಸಾಗಿಸಲು ನಿವೃತ್ತಿ ನಂತರ ಗ್ಲೊಬಲ್ ಸೈನಿಕ ಅಕಾಡೆಮಿ ಶುರು ಮಾಡಿದ್ದೇನೆ. ಸೇನಾ ಪೂರ್ವ ತರಬೇತಿಯಿಂದ ಈ ಭಾಗದ ಅಧಿಕ ಅಭ್ಯರ್ಥಿಗಳು ಸೇನೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗುವ ವಿಶ್ವಾಸ ಇದೆ ಎಂದು ಹೇಳಿದರು.

ಇದಕ್ಕೂ ಮುನ್ನ ಶಿಬಿರಾರ್ಥಿಗಳಿಂದ ಪಥ ಸಂಚಲನ ನಡೆಯಿತು. ದೇಶಕ್ಕಾಗಿ ಪ್ರಾಣ ತೆತ್ತ ಯೋಧರ ಗೌರವಾರ್ಥ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ವಿಮಲಾ ಸಿಕೇನಪುರ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಗ್ಲೊಬಲ್ ಸೈನಿಕ ಅಕಾಡೆಮಿಯ ನಿರ್ದೇಶಕರಾದ ಡಾ. ರಘು ಕೃಷ್ಣಮೂರ್ತಿ, ಆರ್.ಜಿ. ಹಿರೇಮಠ, ಸುಮೀತ್ ಸಿಂದೋಲ್, ಪ್ರಕಾಶ ಟೊಣ್ಣೆ, ನಾಗರಾಜ ಕರ್ಪೂರ ಇದ್ದರು. ಅಕಾಡೆಮಿ ಪ್ರಾಚಾರ್ಯೆ ಕಾರಂಜಾ ನಿರೂಪಿಸಿದರು. ಶಿಕ್ಷಕ ಬಸವರಾಜ ವಂದಿಸಿದರು.