ರಕ್ತಹೀನತೆ ಕಡಿಮೆ ಮಾಡಲು ಆಲ್‍ಬೆಂಡಜೋಲ್ ಮಾತ್ರೆ ವಿತರಣೆ

ಚಿತ್ರದುರ್ಗ,ಏ.೧೬: ಜಂತುಹುಳು ಭಾದೆಯಿಂದ ರಕ್ತಹೀನತೆ, ಅಪೌಷ್ಠಿಕತೆ ಉಂಟಾಗಿ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗಾಗಿ ರಕ್ತಹೀನತೆ ಕಡಿಮೆ ಮಾಡಲು ಆಲ್‍ಬೆಂಡಜೋಲ್ ಮಾತ್ರೆ ವಿತರಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ ಹೇಳಿದರು.
 ಇಲ್ಲಿನ ಬುದ್ಧನಗರದ ನಗರ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ (ಎನ್‍ಡಿಡಿ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1 ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಯಾವುದೇ ರೀತಿಯ ಅಪೌಷ್ಠಿಕತೆ ಹಾಗೂ ರಕ್ತಹೀನತೆ ಉಂಟಾಗದಿರಲಿ ಎಂಬ ಉದ್ದೇಶದಿಂದ ಆರು ತಿಂಗಳಿಗೊಮ್ಮೆ ಜಂತುಹುಳು ನಿವಾರಣೆ ಮಾತ್ರೆ ನೀಡಲಾಗುತ್ತಿದೆ. ಮಕ್ಕಳು ಆರೋಗ್ಯವಂತಾಗಿರಲು ಈ ಮಾತ್ರೆ ಪಡೆಯಬೇಕು ಎಂದರು.
 ಪ್ರತಿಯೊಬ್ಬರು ಆರೋಗ್ಯಯುತವಾಗಿದ್ದಲ್ಲಿ ಸದೃಢ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದರು.
 ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಎಲ್. ಪಾಲಾಕ್ಷ ಮಾತನಾಡಿ, ಈ ಕಾರ್ಯಕ್ರಮವನ್ನು 8 ವರ್ಷ ದಿಂದ ಆಲ್‍ಬೆಂಡಜೋಲ್ ಮಾತ್ರೆಯನ್ನು 1 ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ವರ್ಷದಲ್ಲಿ 2 ಬಾರಿ ನೀಡಲಾಗುತ್ತದೆ. ಏಪ್ರಿಲ್ 16 ರಿಂದ 30 ರವರೆಗೆ ಪ್ರತಿ ದಿನ ಪ್ರತಿ ಮನೆ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಅಲ್‍ಬೆಂಡಜೋಲ್ ಜಂತುಹುಳು ಮಾತ್ರೆಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 1 ರಿಂದ 19 ವರ್ಷದ 427866 ಮಕ್ಕಳಿದ್ದಾರೆ. 1 ರಿಂದ 2 ವರ್ಷದ ಮಕ್ಕಳಿಗೆ ಅಲ್‍ಬೆಂಡಜೋಲ್ ಅರ್ಧ ಮಾತ್ರೆ ನೀಡಲಾಗುತ್ತದೆ. 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆ ನೀಡಲಾಗುತ್ತದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು  ಮಾತ್ರೆ ವಿತರಿಸುವ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶ ಮಾಡದೇ ಮನೆಯಿಂದ ಹೊರಗೆ ಕರೆದು ಮಾತ್ರೆ ವಿತರಿಸಬೇಕು. ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರದಿಂದ ಮಾತ್ರೆ ವಿತರಿಸಬೇಕು ಎಂದು ಆರೋಗ್ಯ ಸಿಬ್ಬಂದಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಕುಮಾರಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್, ಬುದ್ಧ ನಗರ ಕೇಂದ್ರದ ವೈದ್ಯಾಧಿಕಾರಿ ಡಾ.ಸುರೇಂದ್ರ ಪ್ರಭಾರೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಹನುಮಂತಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.