ರಕ್ತಸಂಬಂಧಿಗಳಲ್ಲಿ ವಿವಾಹ ಹಾನಿಕಾರಕ

ಧಾರವಾಡ, ಆ4:ಮಾನವ ಅನುವಂಶ ಶಾಸ್ತ್ರ, ಇದು ಮನುಷ್ಯನಿಗೆ ಬಹುಮುಖ್ಯವಾದ ವಿಷಯ. ಆನುವಂಶವಾಗಿ ಬರತಕ್ಕಂತ ಗುಣಗಳು ಹೇಗೆ ಬರುತ್ತವೆ ಎಂಬುದನ್ನು ಗ್ರೆಗೆರ್ ಮಂಡಲ್ ಕಂಡು ಹಿಡಿದ ನಿಯಮಗಳನ್ನು ತಿಳಿದುಕೊಂಡರೆ ವಿಕೃತ ಅಥವಾ ಬುದ್ದಿಮಾಂದ್ಯ ಮಕ್ಕಳು ಜನಿಸುವುದನ್ನು ನಿಲ್ಲಿಸಬಹುದು ಎಂದು ಕ.ವಿ.ವಿಯ ವಿಶ್ರಾಂತ ಕುಲಪತಿ ಪೆÇ್ರ. ಪ್ರಮೋದ ಗಾಯಿ ನುಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ವಿಶಾಲ ರಾಜಶೇಖರ ಹಂಚಿಮನಿ ಸಂಸ್ಮರಣೆ ದತ್ತಿ ಅಂಗವಾಗಿ ಕಲ್ಯಾಣನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಮಜ್ಜಿಗೆ ಪಂಚಪ್ಪ ಸಭಾಭವನದಲ್ಲಿ ಆಯೋಜಿಸಿದ್ದ `ರಕ್ತ ಸಂಬಂಧದೊಳಗಿನ ಮದುವೆ : ಸಾಧಕ-ಬಾಧಕ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ರಕ್ತಸಂಬಂಧಿ ಮದುವೆಗಳು ಬಹಳಷ್ಟು ಅಸಮರ್ಥ ಮಕ್ಕಳ ಜನನಕ್ಕೆ ಕಾರಣವಾಗುತ್ತಿದ್ದು, ಕರ್ನಾಟಕದಲ್ಲಿ ಹೆಚ್ಚಿದೆ. ರಕ್ತಸಂಬಂಧಿಯಲ್ಲಿ ಮದುವೆಯಾಗುತ್ತಿರುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಕಾರಕವೇ ಎನ್ನುವುದನ್ನು ಸಮಾಜಕ್ಕೆ ಸರಿಯಾಗಿ ಅರಿವನ್ನು ಮುಡಿಸಬೇಕಿದೆ.
ಹುಬ್ಬಳ್ಳಿ ಧಾರವಾಡದಲ್ಲಿಯೇ ಹತ್ತಾರು ಮೆಂಟಲ್ ರಿಟೈರ್ಡ ಕೆಂದ್ರಗಳಿವೆ. ಶೇಕಡ ಎಪ್ಪತೈದರಷ್ಟು ಮೆಂಟಲ್ ಆದ ಮಗು ಬಹುತೇಕ ರಕ್ತಸಂಬಂಧಿ ಮದುವೆಯಿಂದ ಆಗಿರುತ್ತದೆ. ಎಲ್ಲಿ ರಕ್ತ-ಸಂಬಂಧಿ ಮದುವೆಗಳಿರುತ್ತವೆಯೋ ಅಲ್ಲಿ ಆನುವಂಶಕ ರೋಗಗಳು ಹೆಚ್ಚು ಇರುತ್ತವೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆನುವಂಶಕ ರೋಗಗಳನ್ನು ಪತ್ತೆ ಹಚ್ಚುವ ಸಾಧ್ಯವಾದಷ್ಟು ನಿವಾರಣೆ ಮಾಡುವ ಕಾರ್ಯವನ್ನು ಡಿಎನ್‍ಎ ಸಂಶೋಧನ ಸೆಂಟರ್ ಕಳೆದ 2010ರಿಂದ ಕಾರ್ಯ ಮಾಡುತ್ತಿದೆ. ಕೋವಿಡ್ ಕಾಲಕ್ಕೆ ಈ ಕೇಂದ್ರ ಯಾವೊಂದು ಹಣ ಪಡೆಯದೇ ಬಹು ದೊಡ್ಡ ಕಾರ್ಯಮಾಡಿತು. ಇಂಥ ಸಂಸ್ಥೆಯಿಂದ ವಿದ್ಯಾರ್ಥಿಗಳು ಮನುಷ್ಯ ಸಂಬಂಧದ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟು ಇದೆ ಎಂದರು.
ಹಿರೇಮಲ್ಲೂರ ಈಶ್ವರನ್ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರಿ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದತ್ತಿದಾನಿ ಚನಬಸಪ್ಪ ಮರದ ದತ್ತಿ ಆಶಯ ಕುರಿತು ಮಾತನಾಡಿದರು.
ಹುಬ್ಬಳ್ಳಿಯ ಕೆ.ಎಚ್. ಪಾಟೀಲ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ ಕು. ಅಕ್ಷತಾ ರಮೇಶ ಸಂಶಿ ಅವರನ್ನು 2021-22ನೇ ಸಾಲಿನಲ್ಲಿ ಬಿ.ಕಾಂದಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಸನ್ಮಾನಿಸಿ, ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿಶಾಲ ಹಂಚಿನಮನಿ ತಾಯಿ ದತ್ತಿ ನಿಧಿಯನ್ನು ಹೆಚ್ಚಿಸಲು ರೂ. 50,000/- ಚೆಕ್‍ನ್ನು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿಯವರಿಗೆ ನೀಡಿದರು.
ವಿಶ್ವೇಶ್ವರಿ ಬ. ಹಿರೇಮಠ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈರಣ್ಣ ಇಂಜಗನೇರಿ ನಿರೂಪಿಸಿದರು. ಆನಂದ ಗೊನ್ನಾಗರ ವಂದಿಸಿದರು.