ರಕ್ತದಾನ ಶ್ರೇಷ್ಠದಾನ :ಡಾ. ರತಿಕಾಂತ ಸ್ವಾಮಿ

ಬೀದರ, ಜೂ.22: ಜಿಲ್ಲೆಯಲ್ಲಿ ರಕ್ತದ ಅಭಾವವಾಗದಂತೆ ನೋಡಿಕೊಳ್ಳುವುದು ಬ್ಲಡ್ ಬ್ಯಾಂಕ್ ಕೇಂದ್ರದ ಕರ್ತವ್ಯವಾಗಿದೆ. ಆದ್ದರಿಂದ ಸರಿಯಾದ ರೀತಿಯಲ್ಲಿ ಸ್ವಯಂ ಪ್ರೇರಿತ ಶಿಬಿರಗಳನ್ನು ಆಯೋಜನೆ ಮಾಡುವುದರೊಂದಿಗೆ ಸಂಗ್ರಹವಾಗಿರುವ ರಕ್ತವನ್ನು ಹಾಳಾಗದಂತೆ ನೋಡಿಕೊಂಡು, ಅಗತ್ಯ ಇರುವ ರೋಗಿಗಳಿಗೆ ಪೂರೈಕೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರತೀಕಾಂತ ಸ್ವಾಮಿ ಹೇಳಿದರು.

ಅವರು ಬುಧವಾರ ಜೂನ್ 14 ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನದಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ ಆದರೆ ರಕ್ತದಾನದಿಂದ ಆರೋಗ್ಯದಲ್ಲಿ ಯಾವುದೆ ಸಮಸ್ಯೆಯಾಗದು. ಇದನ್ನು ಅರೆತು ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು ಎಂದರು. ಬ್ರಿಮ್ಸ್ ಬ್ಲಡ್ ಬ್ಯಾಂಕ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|| ವೀರೇಂದ್ರ ಪಾಟೀಲ ಅವರು ಮಾತನಾಡಿ ರಕ್ತದಾನಿಗಳಿಂದ ಪಡೆದ ರಕ್ತವನ್ನು ಅವಶ್ಯಕತೆ ಇರುವ ರೋಗಿಗಳಿಗೆ ನೀಡುವುದರ ಜೊತೆಗೆ ರಕ್ತದಿಂದ ಪ್ಲಾಸ್ಮಾ ಮತ್ತು ಎಫ.ಎಫ.ಪಿಗಳನ್ನು ಸಹ ಅವಶ್ಯಕತೆ ಇರುವ ರೋಗಿಗಳಿಗೆ ನೀಡಿ, ಒಬ್ಬ ರಕ್ತದಾನಿಯಿಂದ ಪಡೆದ ರಕ್ತದಿಂದ ಮೂರು ಜೀವನವನ್ನು ರಕ್ಷಣೆ ಮಾಡಲಾಗುತ್ತಿದೆ. ಆದ್ದರಿಂದ ರಕ್ತದಾನವು ಬಹಳ ಶ್ರೇಷ್ಠ ದಾನವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ರಕ್ತದಾನದ ಮಹತ್ವ ವಿಷಯದ ಕುರಿತು ಅಂತರ್ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ವಿಜೆತರಾದ ವಿದ್ಯಾರ್ಥಿಗಳಾದ ಶ್ರೀ ಝರಾ ನಾನಕ ಸಾಹೇಬ ಕಾಲೇಜ್ ಆಫ ನರ್ಸಿಂಗ್ ಕಾಲೇಜಿನ ಸತೀಶ ಪ್ರಥಮ ಬಹುಮಾನ, ಕರ್ನಾಟಕ ಮಹಾವಿದ್ಯಾಲಯದ ಸ್ವಾತಿ ರಮೇಶ ದ್ವಿತೀಯ ಬಹುಮಾನ ಮತ್ತು ಶ್ರೀಸಾಯಿ ಚೈತನ್ಯ ಮಹಾವಿದ್ಯಾಲಯದ ವೈಷ್ಣವಿ ಸ್ಮಾಮಿ ಅವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಅದೇ ರೀತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಸಂಧ್ಯಾ ಚಂದನ, ಶ್ರೀ.ಕಲ್ಲಪ್ಪಾ, ಮಂಜು ವಾಸಮತಿ ಸ್ವಯಂ ಪ್ರೇರಿತವಾಗಿ ಹೆಚ್ಚುಬಾರಿ ರಕ್ತದಾನ ಮಾಡಿರುವ ರಕ್ತದಾನಿಗಳಿಗೆ ನೆನಪಿಕ ಕಾಣಿಕೆಯೊಂದಿಗೆ ಸನ್ಮಾನಿಸಲಾಯಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಶರಣಯ್ಯಾ ಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಶಂಕರ ಬಿ., ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ರಾಜಶೇಖರ ಪಾಟೀಲ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಕಿರಣ ಪಾಟೀಲ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸಂಜುಕುಮಾರ ಪಾಟೀಲ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೇಪ್ಪಾ ಬೊಮ್ಮಾ, ತಾಲೂಕ ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ, ಸಿಎಚ್‍ಸಿ ಸಂತಪೂರ ಕೇಂದ್ರದ ಎಕ್ಸರೇ ತಂತ್ರಜ್ಞ ತುಕರಾಮ ಸಿ. ಮಚ್ಚೆ, ಸರ್ಕಾರಿ ಶುಶ್ರೂತಾ ಶಾಲೆಯ ವಿದ್ಯಾರ್ಥಿಗಳು, ಹೆಚ್‍ಐವಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.