ರಕ್ತದಾನ ಮಾಡುವುದರಿಂದ ಕಷ್ಟದಲ್ಲಿರುವ ರೋಗಿಗಳಿಗೆ ಅನುಕೂಲ: ಪ್ರಭಾ ಮಲ್ಲಿಕಾರ್ಜುನ್ 

ದಾವಣಗೆರೆ.ಜೂ.೧೬; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ 93 ನೇ ಹುಟ್ಟುಹಬ್ಬದ ಪ್ರಯುಕ್ತ ಎಂಸಿಸಿ ಬಿ ಬ್ಲಾಕ್ ನ ಐಎಂಎ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮಕ್ಕ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ್, ರಕ್ತದಾನ ಶ್ರೇಷ್ಠವಾದದ್ದು, ರಕ್ತ ನೀಡುವ ಮೂಲಕ ಕಷ್ಟದಲ್ಲಿರುವವರಿಗೆ ನೆರವಾಗಬೇಕು. ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಪ್ರಾಣ ಉಳಿಸಿದಂತಾಗುತ್ತದೆ ಎಂದು ಹೇಳಿದರು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಕಳೆದ ಜನ್ಮ ದಿನದಂದು 5555 ಮಂದಿ ರಕ್ತ ಸಂಗ್ರಹಣೆ ಮಾಡುವ ಗುರಿ ಜಿಲ್ಲೆಯಾದ್ಯಂತ ಹೊಂದಲಾಗಿತ್ತು. ಈಗಾಗಲೇ ಹಲವು ಕಡೆಗಳಲ್ಲಿ ರಕ್ತ ಸಂಗ್ರಹಣೆ ಮಾಡಲಾಗಿದೆ. ಮಲ್ಲಿಕಾರ್ಜುನ್ ಅವರದ್ದು ಸೆಪ್ಟಂಪರ್ ತಿಂಗಳಿನಲ್ಲಿ ಜನುಮದಿನವಿದೆ. ಅಷ್ಟೊತ್ತಿಗೆ ಈ ಗುರಿಯನ್ನು ತಲುಪುತ್ತೇವೆ. ಈ ಮೂಲಕ ರಕ್ತ ಸಂಗ್ರಹಣೆ ಮಾಡಿ ಅಗತ್ಯವಾಗಿ ಬೇಕಾಗಿರುವವರಿಗೆ ನೀಡಲಾಗುವುದು. ಈ ಮೂಲಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಹೇಳಿದರು. ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಹಾಲಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ರಕ್ತದಾನ ಮಾಡಲು ಮುಂದೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹಲವು ಆಸ್ಪತ್ರೆಗಳಲ್ಲಿ ರಕ್ತಕ್ಕೆ ತುಂಬಾನೇ ಬೇಡಿಕೆ ಇದೆ. ಹಲವು ಕಾರಣಗಳಿಂದ ರಕ್ತ ಸಂಗ್ರಹಣೆ ಆಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 15 ರಿಂದ 20ರಷ್ಟು ಕಡಿಮೆ ಆಗಿದೆ. ಈ ನಿಟ್ಟಿನಲ್ಲಿ ಶಾಮನೂರು ಶಿವಶಂಕರಪ್ಪರ ಜನುಮದಿನದ ಪ್ರಯುಕ್ತ 93 ಮಂದಿಯಿಂದ ರಕ್ತ ಸಂಗ್ರಹಿಸಲಾಗಿದೆ. ಈ ಮೂಲಕ ಜನುಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು. ರಕ್ತದಾನ ಮಾಡಲು ಹಿಂದೆ ಸರಿಯುವುದು ಸರಿಯಲ್ಲ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವೂ ಸುಧಾರಿಸುತ್ತದೆ. ಜನರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಕಷ್ಟದಲ್ಲಿರುವ ರೋಗಿಗಳಿಗೆ, ಕುಟುಂಬದವರಿಗೆ ನೆರವು ಕೊಟ್ಟಂತಾಗುತ್ತದೆ. ಹಾಗಾಗಿ, ರಕ್ತದಾನ ಮಾಡಲು ಪ್ರತಿಯೊಬ್ಬರೂ ಮುಂದೆ ಬರಬೇಕು. ಶಾಮನೂರು ಶಿವಶಂಕರಪ್ಪರ ಹುಟ್ಟುಹಬ್ಬದ ಪ್ರಯುಕ್ತ 93 ಮಂದಿಯಿಂದ ರಕ್ತ ಸಂಗ್ರಹಿಸುವ ಗುರಿ ಹೊಂದಿದ್ದೆವು. ಅದೇ ರೀತಿಯಲ್ಲಿ 93 ಜನರು ಸ್ವಯಂಪ್ರೇರಣೆಯಿಂದ ಬಂದು ರಕ್ತ ನೀಡಿದರು ಎಂದು ಮಾಹಿತಿ ನೀಡಿದರು. 93 ನೇ ವರ್ಷದ ಜನುಮದಿನ ಪ್ರಯುಕ್ತ 93 ಮಂದಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.ಈ ವೇಳೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಮುದ್ದೇಗೌಡ್ರು ಗಿರೀಶ್, ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಸೈಯ್ಯದ್ ಚಾರ್ಲಿ, ಆಶಾ ಉಮೇಶ್, ಎ. ನಾಗರಾಜ್, ಹುಲ್ಲುಮನೆ ಗಣೇಶ್, ಅಯೂಬ್ ಪೈಲ್ವಾನ್, ಎಂಸಿಸಿ ಬಿ ಬ್ಲಾಕ್ ನ ನಾಗರಿಕರು, ಮುಖಂಡರು ಹಾಜರಿದ್ದರು.