ರಕ್ತದಾನ ಮಾಡಿ ಸಂಜೀವಿನಿಯಾಗಿ: ಚಿಕ್ಕಣ್ಣನವರ

ಬ್ಯಾಡಗಿ,ಎ28: ಕೇಂದ್ರ ಸರಕಾರ ಕೋವಿಡ್ -19ರ ನಿಯಂತ್ರಣದ ಹಿನ್ನೆಲೆಯಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ನಿರೋಧಕ ಲಸಿಕೆ ಪಡೆದುಕೊಳ್ಳಲು ಮುಕ್ತ ಅವಕಾಶ ಪ್ರಕಟಿಸಿದ್ದು, ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳುವ ಮುನ್ನ ದಯವಿಟ್ಟು ರಕ್ತದಾನ ಮಾಡಿ ಇತರ ಜೀವಗಳಿಗೆ ಸಂಜೀವಿನಿಯಾಗಬೇಕೆಂದು ರಾಜ್ಯ ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕದ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶವನ್ನು ಕಲ್ಪಿಸಿರುವ ಸರ್ಕಾರಗಳಿಂದ ಕೋವಿಡ್ ನಿಯಂತ್ರಣಕ್ಕೆ ಅತ್ಯಂತ ಮಹತ್ವದ ನಡೆಯಾಗಿದೆ. ಆದರೆ ಲಸಿಕೆ ಹಾಕಿಸಿಕೊಳ್ಳುವ ಮೊದಲು ಅರ್ಹ ರಕ್ತದಾನಿಗಳು “ರಕ್ತದಾನ ಮಾಡಿ ಒಂದು ಅಮೂಲ್ಯ ಜೀವ ಉಳಿಸಿ” ಎಂಬ ವಿನೂತನ ಜಾಗೃತಿ ಅಭಿಯಾನವನ್ನೂ ತಾವು ಜಿಲ್ಲೆಯ ರಕ್ತ ಭಂಡಾರ ಕೇಂದ್ರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆರಂಭಿಸಿದ್ದು, ಇದಕ್ಕೆ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನಕ್ಕೆ ಮುಂದಾದರೆ ರಕ್ತದ ಕೊರತೆಯನ್ನು ನಿವಾರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.

ಕೋವಿಡ್ ನಿರೋಧಕ ಲಸಿಕೆ ಅಭಿಯಾನವು ಮೇ 1ರಿಂದ 18ರಿಂದ 45 ವರ್ಷದವರಿಗಾಗಿ ಆರಂಭವಾಗುತ್ತದೆ. ರಾಷ್ಟ್ರಿಯ ರಕ್ತ ಸಂಚರಣ ಪರಿಷತ್ (ಎಬಿಟಿಸಿ) ಪ್ರಕಾರ ಯಾವುದೇ ಲಸಿಕೆ ಪಡೆದ ನಾಲ್ಕು ವಾರಗಳ ತನಕ ರಕ್ತದಾನ ಮಾಡಲು ಅವಕಾಶ ಇಲ್ಲ. ಕೋವಿಡ್ ಲಸಿಕೆ ಎರಡು ಹಂತದಲ್ಲಿ ಪಡೆಯಬೇಕು. ಈ ಹಂತದಲ್ಲಿ ದೇಶದಲ್ಲಿ ರಕ್ತದ ಕೊರತೆ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಕೋವಿಡ್ ಭಯದಲ್ಲಿ ಈಗಾಗಲೇ ರಕ್ತದಾನಿಗಳ ಕೊರತೆ ಹೆಚ್ಚಾಗಿದೆ. ಕಳೆದೊಂದು ವರ್ಷದಿಂದ ತಾವು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾಧ್ಯವಾದಷ್ಟು ರಕ್ತದಾನ ಶಿಬಿರಗಳನ್ನು ನಡೆಸಲು ದಾನಿಗಳಿಂದ ರಕ್ತವನ್ನು ಸಂಗ್ರಹ ಮಾಡಿ ರಕ್ತ ಭಂಡಾರ ಕೇಂದ್ರಕ್ಕೆ ನೀಡಿದ್ದೇವೆ. ಲಸಿಕೆಗೂ ಮೊದಲು ರಕ್ತದಾನ ಮಾಡಿ ಎಂಬ ಮನವಿಯನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿಕೊಳ್ಳಲಾಗುತ್ತಿದ್ದು, ರಕ್ತ ನಿಧಿಗಳಲ್ಲಿ ರಕ್ತ ಸಂಗ್ರಹಣಾ ಕೊರತೆ ನೀಗಿಸಲು ಇದೊಂದೇ ದಾರಿಯಾಗಿದೆ ಎಂದು18ರಿಂದ 55 ವರ್ಷದೊಳಗಿನ ಜನರಲ್ಲಿ ಮಲ್ಲೇಶಪ್ಪ ಚಿಕ್ಕಣ್ಣನವರ ಮನವಿ ಮಾಡಿದ್ದಾರೆ.