ರಕ್ತದಾನ ಮಾಡಿ ರೋಗಿಯ ಜೀವ ಉಳಿಸಿ


ಸಂಜೆವಾಣಿ ವಾರ್ತೆ
ಕುರುಗೋಡು:ಜು.08: ಆರೋಗ್ಯಕರ ವ್ಯಕ್ತಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು ಎಂದು ವೈದ್ಯಾಧಿಕಾರಿ ಡಾ.ರೂಪಾ ಜಾಲಿಹಾಳ್ ಸಲಹೆ ನೀಡಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ಅದನ್ನು ಕೃತವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಯುವಕರು ಸ್ವಯಂಪ್ರೇರಣೆಯಿಂದ ರಕ್ತದಾನಮಾಡಿ ರೋಗಿಯ ಜೀವ ಉಳಿಸಿ ಎಂದರು.
ರಕ್ತದಾನ ದಿಂದ ವ್ಯಕ್ತಿಗೆಯಾವುದೇ ತೊಂದರೆಯಾಗುವುದಿಲ್ಲ. 24 ಗಂಟೆಯೊಳಗೆ ದೇಹದಲ್ಲಿ ರಕ್ತ ಸಂಗ್ರಹವಾಗುತ್ತದೆ. ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದಲೂ ರಕ್ತದಾನ ದಿಂದ ರಕ್ಷಣೆಗೆ ಪಡೆಯಬಹುದಾಗಿದೆ ಎಂದರು.
ಶಿಬಿರದಲ್ಲಿ 62 ಜನ ಯುವಕರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಡಾ.ರಂಗಸ್ವಾಮಿ, ಆರೋಗ್ಯ ಸಹಾಯಕರಾದ ಕೆ.ಮಂಜುನಾಥ, ಎಸ್.ಬಸವರಾಜ, ಆಪ್ತ ಸಮಾಲೋಚಕ ಕರಿಬಸವ, ಪ್ರಯೋಗಾಯಲಯ ಸಿಬ್ಬಂದಿ ಶೃತಿ ಮತ್ತು ಶ್ರೀನಿವಾಸ ರೆಡ್ಡಿ, ಪುರಸಭೆ ಸದಸ್ಯ ವಿ.ವೀರೇಶ್, ಎನ್.ಕೊಮಾರೆಪ್ಪ ಇದ್ದರು.
ಒತ್ತಾಯ:
ಕುರುಗೋಡು ಪಟ್ಟಣದಲ್ಲಿ ಹೆಚ್ಚು ಜನರು ರಕ್ತದಾನಿಗಳಿದ್ದರೂ ರಕ್ತಭಂಡಾರ ಪ್ರಾರಂಭಗೊಂಡಿಲ್ಲದ ಬಗ್ಗೆ ಶಿಬಿರದಲ್ಲಿ ದಾನಿಗಳು ಬೇಸರ ವ್ಯಕ್ತಪಡಿಸಿದರು.
ನಮ್ಮ ಕುಟುಂಬದವರಿಗೆ ರಕ್ತದ ಅಗತ್ಯ ಬಿದ್ದರೆ ಬಳ್ಳಾರಿ ವಿಮ್ಸ್ ನಲ್ಲಿ ಅಂಗಲಾಚುವ ಪರಿಸ್ಥಿತಿ ಇದೆ. ಕೂಡಲೇ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತಭಂಡಾರ ಪ್ರಾರಂಭಿಸಬೇಕು ಎಂದು ರಕ್ತದಾನಿಗಳು ಒತ್ತಾಯಿಸಿದರು

One attachment • Scanned by Gmail