ರಕ್ತದಾನ ಮಾಡಿ ಜೀವ ಉಳಿಸಿ

ಕೊರಟಗೆರೆ, ಜು. ೧೯- ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು. ನಮ್ಮ ಒಂದೊಂದು ಹನಿ ರಕ್ತವು ಒಂದೊಂದು ಜೀವವನ್ನು ಉಳಿಸುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯಕುಮಾರ್ ತಿಳಿಸಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ನೀವು ನೀಡುವ ಒಂದೊಂದು ಹನಿ ರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ ಮತ್ತು ರಕ್ತದಾನ ಮಾಡಿದವರಲ್ಲಿ ಹೊಸ ರಕ್ತ ಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ ಹಾಗೂ ಹೃದಯಘಾತ, ಇನ್ನಿತರ ರೋಗಗಳನ್ನು ತಡೆಗಟ್ಟಬಹುದು. ಒಟ್ಟಾರೆ ರಕ್ತದಾನದಿಂದ ರಕ್ತದಾನಿ ಮತ್ತು ರಕ್ತ ಪಡೆದವರು ಇಬ್ಬರಿಗೂ ಲಾಭವಾಗುವುದು ನಿಶ್ಚಿತ ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ ಸುಮಾರು ೨೫ ಜನರು ರಕ್ತವನ್ನು ನೀಡಿದ್ದಾರೆ ಎಂದು ತಾಲ್ಲೂಕು ಆರೋಗ್ಯ ಇಲಾಖೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎನ್. ಪದ್ಮಿನಿ, ಐಸಿಟಿಸಿ ಸಮಾಲೋಚಕ ದೇವರಾಜು, ಆರ್.ಕೆ.ಎಸ್.ಕೆ. ಸಮಾಲೋಚಕರಾದ ಕಲ್ಪನಾ, ಎಸ್.ಟಿ.ಎಸ್. ರವಿಚಂದ್ರಕುಮಾರ್, ಡಾ. ಶೇಕ್ ಅಹಮ್ಮದ್, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಪಾಲ್ಗೊಂಡಿದ್ದರು.