ಬ್ಯಾಡಗಿ,ಜೂ.24: ದಾನಗಳಲ್ಲಿ ರಕ್ತದಾನ ಮಹಾದಾನವಾಗಿದೆ. ಪ್ರತಿಯೊಬ್ಬರು ಸಹ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕು ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್, ಪರಿಸರ ಸ್ನೇಹಿ ಬಳಗ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ರಕ್ತ ಭಂಡಾರದ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪಘಾತ ಹಾಗೂ ಇತರ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಆ ಸಮಯ ರೋಗಿ ಪಾಲಿಗೆ ಪ್ರತಿ ನಿಮಿ ಷವೂ ಅಮೂಲ್ಯ. ರಕ್ತ ಕೊರತೆ ತಪ್ಪಿಸಿ, ಆತನ ಪ್ರಾಣ ಉಳಿಸಲು ರಕ್ತ ಅತ್ಯವಶ್ಯವಕವಾಗಿರುತ್ತದೆ ಎಂದರಲ್ಲದೇ, ರೋಟರಿ ಸಂಸ್ಥೆಯು ಸೇವಾ ಕಾರ್ಯಗಳ ಮೂಲಕ ಜನಮಾನಸದಲ್ಲಿ ಉಳಿದಿದೆ ಎಂದು ಶ್ಲಾಘಿಸಿದರು.
ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಬಸವರಾಜ ತಳವಾರ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ 19ಲಕ್ಷ ಜನಸಂಖ್ಯೆಯಿದ್ದು, ಪ್ರತಿದಿನ 20ರಿಂದ 40ಯೂನಿಟ್ ರಕ್ತ ಅವಶ್ಯವಾಗಿ ಬೇಕಾಗಿದೆ. ರಕ್ತದಾನಿಗಳ ಪ್ರಮಾಣ ಅತಿ ಕಡಿಮೆಯಿದ್ದು, ಜಾಗೃತಿಯ ಕೊರತೆಯೂ ಹೆಚ್ಚಾಗಿದೆ. ಇಂತಹ ಕಾರ್ಯಕ್ರಮಗಳ ಬಗ್ಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರಲ್ಲದೇ, ಸರ್ಕಾರಿ ಜಿಲ್ಲಾ ರಕ್ತ ನಿಧಿ ಕೇಂದ್ರದ ವತಿಯಿಂದ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಉಪ್ಪಾರ, ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಮೋಹನಕುಮಾರ ಹುಲ್ಲತ್ತಿ ಅವರಿಗೆ ಶಿಬಿರದಲ್ಲಿ 80ಕ್ಕೂ ಹೆಚ್ಚೂ ರಕ್ತದಾನಿಗಳನ್ನ ಕೂಡಿಸುವ ಮೂಲಕ ರಕ್ತದಾನ ಪಡೆದಿದ್ದಕ್ಕೆ ವಿಶೇಷ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರಲ್ಲದೇ ರಕ್ತದಾನ ಮಾಡಿದ ಎಲ್ಲರಿಗೂ ಅಭಿನಂದನಾ ಪತ್ರಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪುಟ್ಟರಾಜು, ಡಾ. ಶ್ರೀನಿವಾಸ, ಡಾ.ವೀರೇಶ, ಡಾ.ಚೇತನ್, ಹಾನಗಲ್ಲಿನ ರಕ್ತ ಸೈನಿಕ ಕರಬಸಪ್ಪ ಗೊಂದಿ, ರೋಟರಿ ಸಂಸ್ಥೆಯ ಸದಸ್ಯರಾದ ಡಾ.ಎಸ್.ಎನ್.ನಿಡಗುಂದಿ, ಬಸವರಾಜ ಸುಂಕಾಪುರ, ಪರಶುರಾಮ ಮೇಲಗಿರಿ, ಮಾಲತೇಶ ಉಪ್ಪಾರ, ಅನಿಲಕುಮಾರ ಬೊಡ್ಡಪತಿ, ಆನಂದಗೌಡ ಸೊರಟೂರ, ಸಿದ್ದಲಿಂಗಯ್ಯ ಬೂದಿಹಾಳಮಠ, ವಿರೇಶ ಬಾಗೋಜಿ, ಪವಾಡಪ್ಪ ಆಚನೂರ, ಸತೀಶ ಅಗಡಿ, ಪರಿಸರ ಸ್ನೇಹಿ ಬಳಗದ ಸದಸ್ಯರಾದ ಶೇಖರ ಬಿ.ಕೆ, ನಾಗರಾಜ ರಾಮಣ್ಣನವರ, ಮಾಲತೇಶ, ತಾಲೂಕಾ ಆಸ್ಪತ್ರೆಯ ಹಾಗೂ ರಕ್ತನಿಧಿ ಕೇಂದ್ರದ ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.