
ಬ್ಯಾಡಗಿ,ಮಾ14: ಮಾನವನ ದೇಹದ ಜೀವಸೆಲೆಯಾದ ರಕ್ತವನ್ನು ದಾನವಾಗಿ ನೀಡುವ ಮೂಲಕ ಇನ್ನೊಂದು ಜೀವವನ್ನು ಉಳಿಸುವುದು ಮಹತ್ಕಾರ್ಯವಾಗಿದೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ತಾಲೂಕಾ ಪಂಚಾಯತ್ ಸಾಮರ್ಥ್ಯಸೌಧದಲ್ಲಿ ಶ್ರೀಜಗದ್ಗುರು ಜಯದೇವ ಮುರುಘಾರಾಜೇಂದ್ರ ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸೇವಾಸಂಸ್ಥೆ, ಭ್ರಷ್ಟಾಚಾರ ವಿರೋಧಿ ಜನಾಂದೋಲನ ರಾಜ್ಯ ಘಟಕ ಹಾಗೂ ತಾಲೂಕ ಪಂಚಾಯತ ಬ್ಯಾಡಗಿ ಮತ್ತು ರಕ್ತ ಭಂಡಾರ ವಿಭಾಗ ಹಾವೇರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನದ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾಡಿ ಇನ್ನೊಬ್ಬರ ಜೀವವನ್ನು ಉಳಿಸಿದವರ ಮಹತ್ಕಾರ್ಯವನ್ನು ಗುರುತಿಸುವಂತಾಗಲು ಮತ್ತು ದಾನವಾಗಿ ಪಡೆದ ರಕ್ತದಿಂದ ಜೀವ ಉಳಿಸಿಕೊಂಡವರು ಕೃತಜ್ಞತೆ ಸಲ್ಲಿಸಲು ಸೂಕ್ತ ವೇದಿಕೆ ಕಲ್ಪಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ತಹಶೀಲ್ದಾರ ಎಸ್.ಎ.ಪ್ರಸಾದ ಮಾತನಾಡಿ, ಹೆಚ್ಚಿನವರಿಗೆ ತನಗೆ ಅಥವಾ ತನ್ನ ಸಂಬಂಧಿಗಳಿಗೆ ತುರ್ತು ರಕ್ತದ ಅವಶ್ಯಕತೆ ಉಂಟಾದಾಗ ಮಾತ್ರ ರಕ್ತದಾನದ ಮಹತ್ವ ಅರಿವಾಗುತ್ತದೆ. ಇತ್ತೀಚಿಗಿನ ಅಂಕಿಅಂಶಗಳಿಂದ ರಕ್ತದ ಬೇಡಿಕೆ ಮತ್ತು ಪೂರೈಕೆ ನಡುವೆ ಭಾರೀ ಅಂತರವಿರುವುದು ವೇದ್ಯವಾಗುತ್ತದೆ. ರಕ್ತದ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸುವುದರಿಂದ ಮತ್ತು ಜನರನ್ನು ರಕ್ತದಾನಿಗಳಾಗಲು ಪ್ರೇರೇಪಿಸುವುದರಿಂದ ಈ ಅಂತರವನ್ನು ಕಡಿಮೆ ಮಾಡುವುದು ಸಾಧ್ಯವಾಗಿದೆ ಎಂದು ತಿಳಿಸಿದರು.
ಶಿಬಿರದ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, ಇಂದಿನ ಶಿಬಿರದಲ್ಲಿ ತಹಶೀಲ್ದಾರ ಸೇರಿದಂತೆ ನೌಕರ ವರ್ಗದ ಸುಮಾರು 26 ಜನರು ತಮ್ಮ ರಕ್ತವನ್ನು ದಾನವಾಗಿ ನೀಡಿದ್ದು, ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಕ್ತದಾನ ಎಲ್ಲರಿಗೂ ಗೌರವಿಸಿ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಾವೇರಿ ರಕ್ತ ಭಂಡಾರ ವಿಭಾಗದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ, ಎಂ.ಎ.ಅಗಸರ, ಎಂ.ಎಫ್.ಕರಿಯಣ್ಣನವರ, ಪುಷ್ಪವತಿ ಪ್ಯಾರಾ ಮೆಡಿಕಲ್ ಕಾಲೇಜ ವಿದ್ಯಾರ್ಥಿಗಳು ಮತ್ತು ಜಿಲ್ಲಾಸ್ಪತ್ರೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.