
ಕೂಡ್ಲಿಗಿ.ಜ.12:-ಅಪಘಾತ, ಹೆರಿಗೆ ಸಮಯ ಸೇರಿದಂತೆ ಇತರೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವವಾಗಿ ಜೀವನ್ಮರಣದಲ್ಲಿ ಹೋರಾಡುತ್ತಿರುವವರಿಗೆ ನೀವು ಮಾಡಿದ ರಕ್ತದಾನದಿಂದ ಆ ವ್ಯಕ್ತಿಯ ಪ್ರಾಣ ಉಳಿಸಿದ ಪುಣ್ಯ ನಿಮಗೆ ಸಲ್ಲುತ್ತದೆ ಎಂದು ಕೂಡ್ಲಿಗಿ ಪಟ್ಟಣಪಂಚಾಯತಿ ಅಧ್ಯಕ್ಷೆ ಶಾರದಾಬಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸೋಮವಾರ ಪಟ್ಟಣದ ಸಮೃದ್ಧಿ ಟ್ರಸ್ಟ್ ಶಾಲೋಮ್ ಪ್ರಾರ್ಥನಾಲಯದಲ್ಲಿ ಆಯೋಜಿಸಿದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ (ರಕ್ತ ಸುರಕ್ಷತೆ), ಜಿಲ್ಲಾ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಘಟಕ ಬಳ್ಳಾರಿ, ತಾಲ್ಲೂಕು ಸಾವ೯ಜನಿಕ ಆಸ್ಪತ್ರೆ ಕೂಡ್ಲಿಗಿ, ಸಮೃದ್ಧಿ ಟ್ರಸ್ಟ್ ಶಾಲೋಮ್ ಪ್ರಾಥ೯ನಾಲಯ ಕೂಡ್ಲಿಗಿ ಹಾಗೂ ವಿಮ್ಸ್ ರಕ್ತ ಭಂಡಾರ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಜಾತಿ ಧರ್ಮ ಮೀರಿ ಇಂತಹ ಶಿಬಿರಗಳು ಏರ್ಪಡಿಸಿದರೆ ಅನೇಕರ ಪ್ರಾಣ ರಕ್ಷಣೆಗೆ ಸಹಕಾರಿಯಾಗಬಲ್ಲದು ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಪಟ್ಟಣಪಂಚಾಯತಿ ಸದಸ್ಯ ಕಾಲ್ಚಟ್ಟಿ ಈಶಪ್ಪ ಮಾತನಾಡಿ ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮನಸ್ಸು ಎಲ್ಲರಲ್ಲೂ ಬರಬೇಕು ನಾವು ಇನ್ನೊಬ್ಬರ ಪ್ರಾಣ ಉಳಿಸಿದರೆ ನಮ್ಮ ಪ್ರಾಣಕ್ಕೆ ಕುತ್ತು ಬಂದಾಗ ಯಾವುದೋ ರೂಪದಲ್ಲಿ ನಾವು ಮಾಡಿದ ಪುಣ್ಯ ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಸಿದರು. ಡಾ.ಎಸ್. ಪಿ. ಪ್ರದೀಪ್ ಮಾತನಾಡಿ ರಕ್ತದಾನ ಮಾಡಿದರೆ ನಮ್ಮ ಮೈ ರಕ್ತ ಕಡಿಮೆಯಾಗುತ್ತದೆ ಎಂಬುವುದು ತಪ್ಪು ಕಲ್ಪನೆ 18ವರ್ಷ ಮೇಲ್ಪಟ್ಟವರು ಪುರುಷರು 3ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಮಹಿಳೆಯರು 4ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಯಾವುದೇ ಕಾಯಿಲೆಯಿಂದ ಬಳಲುವವರು ರಕ್ತದಾನ ಮಾಡಬಾರದು ಎಂದು ತಿಳಿಸಿದರು. ಶಾಲೋಮ್ ಪ್ರಾಥ೯ನಾಲಯದ ಫಾದರ್ ಪರುಶುರಾಮ ಪೀಟರ್ ಮತ್ತು ರುತು ಫಾಸ್ಟರ್ ಐ.ಸಿ.ಟಿ.ಸಿ. ಆಪ್ತಸಮಾಲೋಚಕರಾದ ಪ್ರಶಾಂತ ಕುಮಾರ್ ಕೆ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಯೋಗ ಶಾಲಾ ತಂತ್ರಜ್ಞರಾದ ಸೋಮಶೇಖರ್, ಜೆ.ಜಿ ಗುರುಬಸವರಾಜ, ಬೋರಣ್ಣ, ದೊಡ್ಡಪ್ಪ, ಸೌಖ್ಯ ಬೆಳಕು ಸಮುದಾಯ ಸಂಸ್ಥೆಯ ಸಿಬ್ಬಂದಿಗಳಾದ ಅರುಣ್ , ದೇವಮ್ಮ, ಸಿದ್ದಮ್ಮ ಕೆ.ನಿಮ೯ಲ, ಓಬಮ್ಮ, ರೇಣುಕಾ , ವಿಮುಕ್ತಿ ಏಡ್ಸ್ ತಡೆಗಟ್ಟುವ ಸಿಬ್ಬಂದಿಗಳಾದ ದುರುಗಮ್ಮ, ಬೊಮ್ಮಕ್ಕ, ಮಹೇಂದ್ರ , ಸೋಮಶೇಖರ್, ಉಮಾ, ರಾಮಾಂಜಿನಪ್ಪ, ಮೈರಾಡ ಸಂಸ್ಥೆಯ ಸಿಬ್ಬಂದಿಗಳಾದ ಆಲೂರಪ್ಪ, ಕುಮಾರಿ ಗೌರಮ್ಮ, ರಕ್ತ ದಾನಿಗಳಾದ ಸುರೇಶ್ ಮತ್ತು ಶಿವರಾಂ ಸೈನಿಕರು ಸಾಲುಮನಿ ರಾಘವೇಂದ್ರ ಮಹೇಂದ್ರ ಇನ್ನಿತರ ರಕ್ತ ದಾನಿಗಳು ಹಾಗೂ ವಿಮ್ಸ್ ರಕ್ತ ಭಂಡಾರ ಬಳ್ಳಾರಿ ಸಿಬ್ಬಂದಿಗಳು ಭಾಗವಹಿಸಿ 30 ಕ್ಕಿಂತ ಹೆಚ್ಚು ರಕ್ತ ದಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.