ರಕ್ತದಾನ ಜಾಗೃತಿ ಅತ್ಯವಶ್ಯ

ಬ್ಯಾಡಗಿ, ಡಿ 29- ರಕ್ತದಾನ ಮಾಡಿದಾಗ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ಚೆನ್ನಾಗಿರುವುದಲ್ಲದೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ ಎನ್ನುವ ತಪ್ಪು ಕಲ್ಪನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕನಕಪುರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಸ್.ಎನ್. ಕಲ್ಕಣಿ ಹೇಳಿದರು.
ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ವಿರೋಧಿ ಜನಾಂದೋಲನದ ನ್ಯಾಸ ಘಟಕ, ಆರೋಗ್ಯ ಇಲಾಖೆ, ಪರಿಸರ ಸ್ನೇಹಿ ಬಳಗ ಹಾಗೂ ಹಾವೇರಿ ಜಿಲ್ಲಾ ರಕ್ತ ಭಂಡಾರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ದಾನಗಳಲ್ಲಿ ಅತ್ಯಂತ ಶ್ರೇಷ್ಠವಾಗಿರುವುದು ರಕ್ತದಾನ. ರಕ್ತದ ಅವಶ್ಯಕತೆಯುಳ್ಳ ವ್ಯಕ್ತಿಗೆ ಕೋಟ್ಯಾಂತರ ಹಣ ನೀಡಿದರೂ ಕೆಲವು ಬಾರಿ ತನ್ನ ರಕ್ತಕ್ಕೆ ಹೊಂದುವಂತ ರಕ್ತ ಸಿಗುವುದಿಲ್ಲ. ನಮ್ಮ ಕಣ್ಣಿಗೆ ಕಾಣದ ಒಬ್ಬ ವ್ಯಕ್ತಿಯ ಜೀವ ಉಳಿಸುವ ಮಹಾನ್ ಕಾರ್ಯ ರಕ್ತದಾನದಿಂದ ಆಗುತ್ತದೆ ಎಂದರು.
ರಕ್ತ ಭಂಡಾರ ವೈದ್ಯಾಧಿಕಾರಿ ಬಸವರಾಜ ತಳವಾರ ಮಾತನಾಡಿ,18 ರಿಂದ 60 ವರ್ಷದ ಒಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಲು ಯೋಗ್ಯರಾಗಿದ್ದು, ರಕ್ತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಭಾಗವಹಿಸುವ ಮೂಲಕ ರಕ್ತಹೀನತೆಯಿಂದ ಬಳಲುವವರಿಗೆ ತಮ್ಮ ರಕ್ತವನ್ನು ದಾನವಾಗಿ ನೀಡುವುದರೊಂದಿಗೆ ಅವರ ಜೀವನಕ್ಕೆ ನೆರವಾಗಬೇಕು ಎಂದು ತಿಳಿಸಿದರು.
ಶಿಬಿರದ ರೂವಾರಿ ನ್ಯಾಸ ಘಟಕದ ರಾಜ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ತಮ್ಮ ನ್ಯಾಸ ಘಟಕದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಹಾಗೂ ಸಂಘಟನೆಗಳ ಸಹಕಾರದೊಂದಿಗೆ ತಾಲೂಕಿನಾದ್ಯಂತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ 340 ಯೂನಿಟ್ ರಕ್ತವನ್ನು ದಾನದ ರೂಪದಲ್ಲಿ ಸಂಗ್ರಹಿಸಿದ್ದು, ಅದರಿಂದ 1020 ಜನರಿಗೆ ನೆರವಾಗಲು ಉಪಯೋಗವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಡೆದ ಶಿಬಿರದಲ್ಲಿ 25 ಆರೋಗ್ಯವಂತ ಜನರಿಂದ ರಕ್ತವನ್ನು ದಾನವಾಗಿ ಪಡೆದಿದ್ದು, ರಕ್ತದಾನ ಮಾಡಿದ ಅವರೆಲ್ಲರಿಗೂ ಅಭಿನಂದನಾ ಪತ್ರದೊಂದಿಗೆ ಒಂದೊಂದು ಸಸಿಯನ್ನು ವಿತರಿಸಿ ಪರಿಸರವನ್ನು ರಕ್ಷಿಸಲು ಕೋರಲಾಯಿತು. ಶಿಬಿರದಲ್ಲಿ ಡಾ.ಬಸವರಾಜ ಕಮತದ, ಡಾ.ನಾಗರಾಜ, ನ್ಯಾಸ ಘಟಕದ ಜಿಲ್ಲಾ ಸಂಚಾಲಕರಾದ ವಿ.ಆರ್. ತೋಟದ, ಫರೀದಾ ನದ್ದಿಮುಲ್ಲಾ, ಮೋಹನಕುಮಾರ ಹುಲ್ಲತ್ತಿ, ಚಂದ್ರಶೇಖರ ಕರೇಗೌಡ್ರ, ನಾಗರಾಜ ನಾಗಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.