ತಾಳಿಕೋಟೆ:ಸೆ.26: ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ದೇಶ ಸೇವೆಗೆ ಸಮಾನವಾದ ಪ್ರಕ್ರಿಯೆ, ರಕ್ತದಾನದಿಂದ ಸ್ವಯಂಚಾಲಿತ ರಕ್ತ ಉತ್ಪತ್ತಿಯಾಗುತ್ತದೆ ಮತ್ತು ಇನ್ನೋಬ್ಬರ ಜೀವ ಉಳಿಸಿದ ಶ್ರೇಯಸ್ಸು, ಪುಣ್ಯ ಲಭಿಸಲಿದೆ ಎಂದು ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಗೌರವಾಧ್ಯಕ್ಷ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ನೇತೃತ್ವದಲ್ಲಿ ಹಾಗೂ ಶ್ರೀ ಸಾಯಿ ರಕ್ತ ತಪಾಸಣಾ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಲಾದ ಬೃಹತ್ ರಕ್ತದಾನ ಶಿಭಿರ ಮತ್ತು ಮದುಮೇಹ ಮತ್ತು ರಕ್ತದೊತ್ತಡ ಪರಿಕ್ಷೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ವೈದ್ಯಕೀಯ ಲೋಕದಲ್ಲಿ ತಂತ್ರಜ್ಞಾನ ಬಹಳಷ್ಟು ಕೆಲಸ ಮಾಡುತ್ತಿದೆ, ಆದರೆ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಹ ಇಂದಿಗೂ ರಕ್ತವನ್ನು ಸಿದ್ಧಪಡಿಸುವಂತಹ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಿಲ್ಲ, ಹೀಗಾಗಿ ರಕ್ತವು ಒಬ್ಬರಿಂದ ಇನ್ನೊಬ್ಬರ ದೇಹಕ್ಕೆ ವರ್ಗಾವಣೆಯಾಗಲೇಬೇಕಾಗಿದೆ ಎಂದರು.
ರಕ್ತದಾನಕ್ಕೆ ಯುವಕರು ಮುಂದಾಗಬೇಕು ಮನುಷ್ಯನ ವಯಸ್ಸು ರಕ್ತದ ಶುದ್ಧತೆಯ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತವನ್ನು ಪಡೆದರೂ ಸಹ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ತಗುಲಿರುತ್ತವೆ ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮಥ್ರ್ಯವೂ ಕೂಡ ಕಡಿಮೆಯಾಗಿರುತ್ತದೆ ಇದರಿಂದ ರೋಗಿಯ ದೇಹಕ್ಕೆ ಹಾಕಲು ಅಷ್ಟೊಂದು ಸೂಕ್ತವಾಗಿರುವುದಿಲ್ಲ ಈ ಎಲ್ಲ ಕಾರಣಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗುವಂತೆ ಕರೆ ನೀಡಿದರು.
ಇನ್ನೋರ್ವ ಶ್ರೀ ಸಾಯಿ ರಕ್ತ ತಪಾಸಣಾ ಕೇಂದ್ರದ ಮುಖ್ಯಸ್ಥ ಪರಶುರಾಮ ಕಟ್ಟಿಮನಿ ಮಾತನಾಡಿ ಬಹುತೇಕ ಜನರಲ್ಲಿ ರಕ್ತ ಕುರಿತಾಗಿ ವಿವರವಾದ ಮಾಹಿತಿ ಇಲ್ಲ, ಹೀಗಾಗಿ ಹಣ ಕೊಟ್ಟರೆ ಸಿಗುವಂತಹ ವಸ್ತು ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿದೆ, ಹಣ ಕೊಟ್ಟ ಪಡೆದ ರಕ್ತವು ಸಹ ಇನ್ನೊಬ್ಬರ ದೇಹದಿಂದ ಬಂದ ದೇಣಿಗೆ ಎಂಬ ಬಗ್ಗೆ ವಿವರವಾದ ಮಾಹಿತಿಗಳು ಸಾರ್ವಜನಿಕರಲ್ಲಿ ರವಾನೆಯಾಗಬೇಕಾಗಿದೆ ರಕ್ತದಾನ ಶಿಬಿರಗಳೆಂದರೆ ಪ್ರಚಾರ ಗಿಟ್ಟಿಸಿಕೊಳ್ಳುವಂತಹ ಕಾರ್ಯಕ್ರಮ ಎಂದು ಭಾವಿಸಿಕೊಳ್ಳಬೇಡಿ, ಮನುಷ್ಯನ ಆರೋಗ್ಯದ ಎಲ್ಲ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು ಮೂತ್ರಪಿಂಡ, ರಕ್ತ, ಕಣ್ಣು ಹೃದಯ ಇನ್ನಿತರ ಭಾಗಗಳನ್ನು ಇನ್ನೊಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ, ಈ ಕುರಿತು ಸಂಘ ಸಂಸ್ಥೆಗಳ ಸಹಕಾರ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಅವಶ್ಯವಿದೆ ಎಂದರು.
ಈ ರಕ್ತದಾನ ಶಿಭಿರದಲ್ಲಿ ಒಟ್ಟು 92 ಜನ ರಕ್ತದಾನ ಮಾಡಿದರು. 159 ಜನ ಮದುಮೇಹ ಮತ್ತು ರಕ್ತದೊತ್ತಡ ಪರಿಕ್ಷೆ ಮಾಡಿಸಿಕೊಂಡರು.
ರಕ್ತದಾನ ಶಿಬಿರ ಪ್ರಾರಂಭಕ್ಕೂ ಮುಂಚೆ ಮಹಾ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಮಯದಲ್ಲಿ ವಿಜಯಪರ ರಕ್ತನಿಧಿ ಕೇಂದ್ರದ ಡಾ.ಶೈಲೇಶ, ವಿಜಯಕುಮಾರ, ಸಂತೋಷ, ಭಾಗು, ವಿನಯಕುಮಾರ, ಹಾಗೂ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.