ರಕ್ತದಾನ, ಅಂಗಾಂಗಗಳ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೨೨; ರಕ್ತದಾನ ಮತ್ತು ಅಂಗಾಂಗಗಳ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.ನಗರದ ಬಾಪುಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ರೆಡ್ ಕ್ರಾಸ್ ದಿನದ ಅಂಗವಾಗಿ ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಸಮೂಹ ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಬಿ.ಇಡಿ ಪ್ರಶಕ್ಷಣಾರ್ಥಿಗಳಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರುಹದಿಹರೆಯದ ಕಾಲಘಟ್ಟದಲ್ಲಿ ದೈಹಿಕ ಮಾನಸಿಕ ಸಾಮಾಜಿಕ ಬದಲಾವಣೆಯಾಗುವುದು ಸಹಜ. ಇಂತಹ ಸಮಯದಲ್ಲಿ ಮನಸ್ಸು ಹಿಡಿತದಲ್ಲಿಟ್ಟುಕೊಂಡು ಜೀವನ ಸಾರ್ಥಕತೆ ಮಾಡಿಕೊಳ್ಳಲು, ಜೀವನ ಸಾರ್ಥಕತೆ ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿ ನಾವು ಸತ್ತ ಮೇಲೂ ಬದುಕಿರಬೇಕಾದರೆ ಅಂಗಾಂಗ ದಾನ ಮಾಡಬೇಕು ಮತ್ತು ರಕ್ತದಾನ ಮಾಡುವುದರ ಮುಖಾಂತರ ಇನ್ನೊಬ್ಬರ ಜೀವ ಉಳಿಸಬೇಕು ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, 10 ರಿಂದ 19 ವರ್ಷದ ಹದಿಹರೆಯದ ವಯಸ್ಸಿನಲ್ಲಿ ಸ್ನೇಹಿತರ ಒತ್ತಡ, ಕುತೂಹಲ, ಗೆಳೆಯರಲ್ಲಿ ಒಂದಾಗಬೇಕೆಂಬ ಭಾವನೆ, ಮನೆಯ ವಾತಾವರಣ, ಇವುಗಳು ಹೆಚ್ಚು ಪ್ರಭಾವ ಬೀರುತ್ತಿದ್ದು, ಇಂತಹ ಸಮಯದಲ್ಲಿ ಮಧ್ಯಪಾನ, ಧೂಮಪಾನದಂತ ದುಶ್ಚಟಗಳ ದಾಸರಾಗುತ್ತಾರೆ ನಮ್ಮ ಹದಿಹರೆಯದವರು. ತಾತ್ಕಾಲಿಕವಾಗಿ ಉಲ್ಲಾಸ, ಮೋಜಿಗಾಗಿ ಪ್ರಾರಂಭಿಸಿದ ಧೂಮಪಾನದ ದುಶ್ಚಟ ಗಂಭೀರ ಸ್ವರೂಪದ ಅನಾರೋಗ್ಯಕ್ಕೆ ಈಡಾಗುತ್ತಿದ್ದು, ಕ್ಷಯ, ಹೃದಯಬಡಿತ ಹೆಚ್ಚುತ್ತೆ, ರಕ್ತದೊತ್ತಡ, ಅಲ್ಸರ್, ಮೆದುಳು ನಿಷ್ಕ್ರಿಯೆಯಾಗಿ ಮಾನಸಿಕ ಬೌದ್ಧಿಕ ಬೆಳವಣಿಗೆ ಕುಂಠಿತ, ಜೀರ್ಣಕ್ರಿಯೆಯಲ್ಲಿ ತೊಂದರೆ, ನರ ದೌರ್ಬಲ್ಯ, ಬಿಪಿ ಏರುಪೇರಾಗಿ ಹೃದಯಾಘಾತ, ಕ್ಯಾನ್ಸರ್, ದಂತಕ್ಷಯ, ಗರ್ಭಪಾತ, ನರ ದೌರ್ಬಲ್ಯ ಬಿಪಿ ಏರುಪೇರಾಗಿ ಹೃದಯಾಘಾತ, ಗರ್ಭಧಾರಣೆಯಲ್ಲಿ ಕುಂಟಿತ ಸಂಭವಿಸಬಹುದು ಎಂದರು.ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಆರೋಗ್ಯ ಶಿಕ್ಷಣ ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು. ಆರೋಗ್ಯದ ಅರಿವು ಪ್ರತಿಯೊಬ್ಬರಿಗೂ ಬೇಕು. ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು ಆರೋಗ್ಯ ಶಿಕ್ಷಣದ ಪಾಠ ಕಲಿತ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ ದೇಶ ಕಟ್ಟಲು ಸಹಕರಿಸಬೇಕು ಎಂದರು.ಪ್ರಾಂಶುಪಾಲರಾದ ಎಂ.ಆರ್.ಜಯಲಕ್ಷ್ಮಿ ಮಾತನಾಡಿ, ಪ್ರೀತಿ ವಿಶ್ವಾಸದಿಂದ ಪ್ರತಿಯೊಂದು ಸಾಧನೆ ಮಾಡಬಹುದು. ನಕ್ಕಷ್ಟು ಆರೋಗ್ಯ ವೃದ್ಧಿ ಆಗುತ್ತೆ, ಸಂತಸದಿಂದ ಕಲಿತ ವಿದ್ಯೆ ಸಮೃದ್ಧಿಯತ್ತ ತಲುಪುತ್ತೆ ಎಂದರು.ಉಪ ಪ್ರಾಚಾರ್ಯರಾದ ಎಚ್.ಎನ್.ಶಿವಕುಮಾರ್ ಮಾತನಾಡಿ, “ಆರೋಗ್ಯವೇ ಮಹಾಭಾಗ್ಯ ಆರೋಗ್ಯವೇ ಸಂಪತ್ತು” ಆರೋಗ್ಯ ಒಂದಿದ್ದರೆ ಏನೆಲ್ಲಾ ಸಂಪಾದಿಸಬಹುದು. ಉತ್ತಮ ಆರೋಗ್ಯ ಅಭ್ಯಾಸಗಳನ್ನು ದಿನನಿತ್ಯ ಪಾಲನೆ ಮಾಡಿಕೊಂಡು ಆರೋಗ್ಯ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂದರು.