ರಕ್ತದಾನದ ಮೂಲಕ ಸಮಾಜಕ್ಕೆ ಅಳಿಲು ಸೇವೆ ಮಾಡಿ

ಚಿತ್ರದುರ್ಗ,ಮಾ.24; ಪ್ರತಿಯೊಬ್ಬ ನಾಗರಿಕರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ ಸಲಹೆ ನೀಡಿದರು.ನಗರದ ಐಎಂಎ ಸಭಾಂಗಣದಲ್ಲಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಚಿತ್ರದುರ್ಗ  ಮತ್ತು ನಿಫಾ ಸಂಸ್ಥೆ (ಎನ್‌ಐಎಫ್‌ಎಎ) ಇವರ ಸಂಯುಕ್ತಾಶ್ರಯದಲ್ಲಿ ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಹುತಾತ್ಮರಾದ ಭಗತ್‌ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಇವರುಗಳ 90ನೇ ವರ್ಷದ ಪುಣ್ಯಸ್ಮರಣೆ  ಅಂಗವಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಸ್ವಾತಂತ್ರ್ಯಕ್ಕಾಗಿ ಭಗತ್‌ಸಿಂಗ್, ರಾಜ್‌ಗುರು, ಮತ್ತು ಸುಖದೇವ್ ಅವರು ಪೀಠಿಕೆ ಹಾಕಿದ್ದಾರೆ. ಅವರ ತ್ಯಾಗ, ಬಲಿದಾನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ಸಂದೇಶ ಅರಿತು ಪ್ರತಿಯೊಬ್ಬ ನಾಗರಿಕರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಮಾಡಬೇಕು. ಬೃಹತ್ ರಕ್ತದಾನ ಶಿಬಿರ ಉಪಯುಕ್ತವಾಗಿದ್ದು ಸಮಾಜಕಟ್ಟುವ, ಜೀವ ಉಳಿಸುವಂತಹ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಕೃತಕ ರಕ್ತ ಉತ್ಪತ್ತಿಗೆ ಸಾಕಷ್ಟು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಇದುವರೆಗೂ ರಕ್ತಕ್ಕೆ ಪರ್ಯಾಯ ವಸ್ತು ಯಾವುದು ದೊರೆತ್ತಿಲ್ಲ. ಒಬ್ಬ ವ್ಯಕ್ತಿ ಸ್ವಇಚ್ಛೆಯಿಂದ ರಕ್ತ ದಾನ ಮಾಡಬಹುದು. ರಕ್ತದಾನಕ್ಕೆ ಇದೊಂದೆ ಮಾರ್ಗ ಇರುವುದು. ಹಾಗಾಗಿ ರಕ್ತದಾನ ಮಹಾದಾನವಾಗಿದೆ ಎಂದರು.ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚಾದ ಹಿನ್ನಲೆ ಎಲ್ಲಿಯೂ ರಕ್ತದಾನ ಶಿಬಿರ ಆಯೋಜಿಸಲು ಸಾಧ್ಯವಾಗಲಿಲ್ಲ. ಕೋವಿಡ್-19ರ ಸಂದರ್ಭದಲ್ಲಿ ಸಾಕಷ್ಟು ಜನರು ರಕ್ತದ ಕೊರತೆಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು. ರಕ್ತದಾನ ಮಾಡಬಯಸುವರು ಯಾವುದೇ ಅಂಜಿಕೆ-ಆತಂಕವಿಲ್ಲದೇ ರಕ್ತ ನೀಡಬಹುದಾಗಿದೆ. ಕೋವಿಡ್-19 ಲಸಿಕೆ ಹಾಕಿಸಿಕೊಂಡವರು 28 ದಿನಗಳ ನಂತರ ರಕ್ತದಾನ ಮಾಡಬಹುದಾಗಿದೆ. ಕೋವಿಡ್-19 ಮಾರ್ಗಸೂಚಿಗಳ ಪಾಲನೆ ಮೂಲಕ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ನಾಲ್ಕು ಜನರ ಜೀವ ಉಳಿಸಲು ಸಾಧ್ಯವಾಗುತ್ತದೆ. ಇದೊಂದು ಸಾಮಾಜಿಕ ಜವಾಬ್ದಾರಿ ಆಗಬೇಕು ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಂಜುನಾಥ್ ಮಾತನಾಡಿ, ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ. ರಕ್ತದಾನಿಗಳೇ ರಕ್ತದ ಮೂಲವಾಗಿದೆ. ಆರೋಗ್ಯವಂತರು ಮಾತ್ರ ರಕ್ತದಾನ ಮಾಡಲು ಸಾಧ್ಯವಾಗಿರುವುದರಿಂದ ಎಲ್ಲರೂ ಆರೋಗ್ಯವಂತರಾಗಿ, ರಕ್ತದಾನ ಮಾಡುವ ಮೂಲಕ ಜೀವ ಉಳಿಸಿ ಎಂದು ಹೇಳಿದರು.ಪ್ರಶಂಸನೀಯ ಪತ್ರ ವಿತರಣೆ: ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಕೊರೊನಾ ಸೈನಿಕರಾಗಿ ಕಾರ್ಯನಿರ್ವಹಿಸಿದ ರೆಡ್ ಕ್ರಾಸ್‌ನ ಸ್ವಯಂ ಸೇವಕರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಶಂಸನೀಯ ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸಾಲಿ ಮಂಜಪ್ಪ, ಕಾರ್ಯದರ್ಶಿ ಡಾ.ರವಿಕುಮಾರ್, ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ವೈ.ಬಿ. ಮಹೇಂದ್ರನಾಥ್, ಕಾರ್ಯದರ್ಶಿ ಎನ್.ಮಜಹರ್ ಉಲ್ಲಾ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಪ್ರದೀಪ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಲೋಲಕ್ಷಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.