ರಕ್ತದಾನದಿಂದ ಸಹಾಯ ಉತ್ತಮ ಕಾರ್ಯ

ವಿಜಯಪುರ.ಮೇ೬:ಯಾವುದೇ ಜಾತಿ, ವರ್ಣ, ಮತ-ಭೇದಗಳಿಲ್ಲದೆ ಮನುಷ್ಯರಿಂದ ಮನುಷ್ಯರಿಗೆ ಮಾತ್ರವೇ ಮಾಡಲು ಸಾಧ್ಯವಾಗುವ ಏಕೈಕ ದಾನ ರಕ್ತದಾನವಾಗಿದ್ದು, ಬೇರೆಲ್ಲ ದಾನಗಳನ್ನು ಯಾರು ಯಾರಿಗೆ ಯಾವಾಗ ಬೇಕಾದರೂ ಮಾಡಬಹುದು, ಆದರೆ ರಕ್ತದಾನಕ್ಕೆ ಹಲವು ನೀತಿ ನಿಯಮಗಳಿದ್ದು ೧೮ರಿಂದ ೬೦ ವರ್ಷ ವಯಸ್ಸಿನೊಳಗಿನ ಆರೋಗ್ಯವಂತ ಮನುಷ್ಯರು ಮಾತ್ರ ರಕ್ತದಾನ ಮಾಡಬಹುದಾಗಿದ್ದು, ಇದರಿಂದ ರಾಷ್ಟ್ರೀಯ ಸಹೋದರತೆ ನಿರ್ಮಾಣವಾಗುತ್ತದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷರಾದ ಎಎಂ.ಮಂಜುಳಾ ರವರು ತಿಳಿಸಿದರು.
ಅವರು ಭಾನುವಾರದಂದು ಇಲ್ಲಿನ ಚನ್ನರಾಯಪಟ್ಟಣ ಸರ್ಕಲ್ ಬಳಿ ಇರುವ ನಂದಿನಿ ವಿದ್ಯಾನಿಕೇತನ ಶಾಲಾ ಕಟ್ಟಡದಲ್ಲಿ ವಿಜಯಪುರ ರೋಟರಿ ಸಂಸ್ಥೆ, ನಂದಿನಿ ವಿದ್ಯಾನಿಕೇತನ ಹಿರಿಯ ವಿದ್ಯಾರ್ಥಿಗಳ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದರು.
ನಂದಿನಿ ಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀ ವತ್ಸ ಮಾತನಾಡುತ್ತಾ ರಕ್ತದಾನ ವೆಂಬುದು ಮನುಷ್ಯ ಹಾಗೂ ಮನುಷ್ಯತ್ವಕ್ಕೆ ಸಂಬಂಧಿಸಿದ ವಿಷಯವಾಗಿರುತ್ತದೆ, ಪ್ರಪಂಚದಲ್ಲಿ ಹಣದಿಂದ ಎಷ್ಟೇ ಸವಲತ್ತು ಸೌಲಭ್ಯಗಳನ್ನು ಬೇಕಾದರೂ ಪಡೆಯಬಹುದು, ಉತ್ತಮ ಆಸ್ಪತ್ರೆ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ, ಆದರೆ ರಕ್ತವನ್ನು ಮಾತ್ರ ಬೇರೆ ಮನುಷ್ಯರಿಂದ ದಾನ ರೂಪದಲ್ಲಿ ಮಾತ್ರ ಪಡೆಯಲು ಸಾಧ್ಯವಾಗುತ್ತದೆ ಎಂದು ಅದಕ್ಕಾಗಿ ಪ್ರತಿಯೊಬ್ಬರು ರಕ್ತದಾನ ಮಾಡಬೇಕೆಂದು ತಿಳಿಸಿದರು.
ನಂದಿನಿ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲರಾದ ಡಿ ಆರ್ ಕೃಷ್ಣನ್ ಕೌಶಿಕ್ ರವರು ಮಾತನಾಡುತ್ತಾ ರಕ್ತದಾನ ಮಾಡುವುದರಿಂದ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ, ಏಕೆಂದರೆ ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುವುದಲ್ಲದೆ ಹೃದಯಘಾತ ತಡೆಗಟ್ಟಬಹುದೆಂದು ಹೊಸ ರಕ್ತದ ಉತ್ಪತ್ತಿಗೆ ಇದು ನಾಂದಿಯಾಗುತ್ತದೆ ಎಂದು, ದೇಶದಲ್ಲಿ ಪ್ರತಿ ಎರಡು ಸೆಕೆಂಡಿಗೆ ರಕ್ತದ ಅವಶ್ಯಕತೆ ಇರುವುದರಿಂದ ಪ್ರತಿಯೊಬ್ಬರು ನಿಗದಿತವಾಗಿ ರಕ್ತದಾನ ಮಾಡುವಂಥವರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಸಿದ್ದರಾಜು, ಮಹೇಶ್, ಕಿರಣ್, ವಿನಯ್, ಎಸ್ ಬಸವರಾಜು, ನಂದಿನಿ ವಿದ್ಯಾನಿಕೇತನ ಶಾಲಾ ಮುಖ್ಯೋಪಾಧ್ಯಾಯರಾದ ವಿಮಲಾ ಸಿದ್ದರಾಜು, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಶಾಲಿನಿ, ಉಪಾಧ್ಯಕ್ಷೆ ರಮ್ಯಾ, ಜುನೈದಾ, ಜವಾದ್,ಸಾಖಿಬ್,ಮಿಸ್‌ಬಾ, ಶಿಕ್ಷಕರುಗಳಾದ ಮಂಜುನಾಥ್ ರಾವ್, ಶೇಕ್ ಮೌಲಾ, ಡಿವಿ ಮಂಜುನಾಥ್, ನಾಗೇಶ್, ಕೆ ಮಂಜುನಾಥ್, ತಿಪ್ಪರಾಜು. ಅನ್ಸರುಲ್ಲಾ,ರೆಡ್ ಕ್ರಾಸ್ ಸಂಸ್ಥೆಯ ವೈದ್ಯರುಗಳಾದ ಡಾಕ್ಟರ್ ಹೇಮಂತ್ ರಾಜ್ ಸಾವಳಗಿ, ಪಿ ಆರ್ ಒ ವರದರಾಜ್, ಕೃಷ್ಣವೇಣಿ, ಪ್ರಶಾಂತ್,ರವಿಕುಮಾರ್,ಮತ್ತಿತರರು ಉಪಸ್ಥಿತರಿದ್ದರು .ಶಿಬಿರದಲ್ಲಿ ೪೦ ಯೂನಿಟ್ ರಕ್ತ ಸಂಗ್ರಹಿಸಲಾಯಿತು.