ರಕ್ತದಾನದಿಂದ ಆರೋಗ್ಯ ವೃದ್ಧಿ, ಜೀವ ದಾನ

ಕಲಬುರಗಿ,ಜೂ.14: ರಕ್ತದಾನದಿಂದ ಹೊಸ ರಕ್ತಕಣಗಳು ಉತ್ಪತ್ತಿಯಾಗಿ, ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ, ರಕ್ತದೊತ್ತಡ ಹಾಗೂ ಹೃದಯಾಘಾತ ಉಂಟಾಗುವ ಸಂಭವ ಕಡಿಮೆಯಾಗುತ್ತದೆ. ಕಿಡ್ನಿ ತೊಂದರೆಗಳು, ಮೆದುಳಿನ ರಕ್ತಸ್ರಾವದಿಂದಾಗುವ ಮೃತ್ಯು ಮತ್ತು ಇನ್ನಿತರ ಘೋರ ಕಾಯಿಲೆಗಳಿಂದ ದೂರವಿರಬಹುದಾಗಿದೆ. ರಕ್ತದಾನದಿಂದ ಸ್ವಂತ ಆರೋಗ್ಯ ವೃದ್ಧಿಸುವುದರ ಜೊತೆಗೆ ಮತ್ತೊಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ ಎಂದು 33 ಬಾರಿ ರಕ್ತದಾನಿ ಲಕ್ಷ್ಮೀಕಾಂತ ಜೋಳದ ಹೇಳಿದರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ‘ವಿಶ್ವ ರಕ್ತದಾನಿಗಳ ದಿನಾಚರಣೆ’ಯಲ್ಲಿ ವಿಶೇಷ ಸತ್ಕಾರ ಸ್ವೀಕರಿಸಿ, ಅವರು ಮಾತನಾಡುತ್ತಿದ್ದರು.
ರಕ್ತದಾನದಿಂದ ದೇಹಕ್ಕೆ ತೊಂದರೆಯಾಗುತ್ತದೆ ಎಂಬ ಭಯ, ತಪ್ಪು ಕಲ್ಪನೆಗಳಿವೆ. 18ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತ, ಕನಿಷ್ಠ 45 ಕೆ.ಜಿ. ತೂಕ ಇರುವವರು 350 ಎಂಎಲ್ ಮತ್ತು 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂ.ಎಲ್ ರಕ್ತದಾನ ಮಾಡಬಹುದು. ದಾನಿಗಳ ಹಿಮೋಗ್ಲೋಬಿನ್ ಪ್ರಮಾಣ ಕನಿಷ್ಠ 12.5 ಇರಬೇಕು. ಒಂದು ಉನಿಟ್ ರಕ್ತದಾನದಿಂದ ನಾಲ್ಕು ಜೀವಗಳನ್ನು ಉಳಿಸಬಹುದಾಗಿದೆ. ನಮ್ಮ ತಂಡ ಜಿಲ್ಲೆಯಾದ್ಯಂತ ರಕ್ತದಾನ ನೀಡಲು ಸದಾ ಸಿದ್ದವಾಗಿದ್ದು, ಆಸಕ್ತರು ಅದಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಸತ್ಕಾರ ಸ್ವೀಕರಿಸಿದ 18 ಬಾರಿ ರಕ್ತದಾನಿ ವೀರೇಶಗೌಡ ಪಾಟೀಲ ಮಾತನಾಡಿ, ರಕ್ತವು ಮಾನವನ ದೇಹದ ಉಳಿವಿಗೆ ಹಾಗೂ ಬೆಳವಣಿಗೆಗೆ ಅತ್ಯಂತ ಅವಶ್ಯಕವಾದಂತಹ ವಸ್ತುವಾಗಿದೆ. ರಕ್ತದಲ್ಲಿರುವ ಹಿಮೋಗ್ಲೋಬಿನವು ಆಕ್ಸಿಜನ್‍ನ್ನು ರಕ್ತದ ಮೂಲಕ ದೇಹದ ಎಲ್ಲಾ ಜೀವಕೋಶಗಳಿಗೆ ಪೂರೈಕೆ ಮಾಡುತ್ತದೆ. ಏನಾದರೂ ಅವಘಡಗಳು ಸಂಭವಿಸಿದಾಗ ಜೀವಕ್ಕೆ ಆಪತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಡಾ.ಸತೀಶ ಟಿ.ಸಣಮನಿ, ಕಾರ್ಯದರ್ಶಿ ಭೀಮಾಶಂಕರ ಎಸ್.ಘತ್ತರಗಿ, ಪ್ರಮುಖರಾದ ಡಾ.ಸುನೀಲಕುಮಾರ ಎಚ್.ವಂಟಿ, ದೇವೇಂದ್ರಪ್ಪ ಗಣಮುಖಿ, ಶಿವಯೋಗಪ್ಪ ಬಿರಾದಾರ, ಅಶ್ವಿನಿ ಜಿ.ಪಾಟೀಲ, ಅರ್ಚನಾ ಎಂ.ಹೀರಾಪುರ, ಸಾಹೇಬಗೌಡ್ ಬಿರಾದಾರ, ಶೈಲಜಾ ಜಿ., ಮಹಾಲಕ್ಷ್ಮೀ ಸಂಕಾ, ಭಾಗ್ಯಶ್ರೀ ಬಿ.ಘತ್ತರಗಿ, ರಮೀಶಾ, ರಿತೀಕಾ ಗುತ್ತೇದಾರ, ರಾಶಿ ಗುತ್ತೇದಾರ ಸೇರಿದಂಯೆ ಇನ್ನಿತರರಿದ್ದರು.